ಉತ್ತಮ ಸಮಾಜಕ್ಕಾಗಿ

‘ಮಹಿಳೆಯರು ಶೋಷಣೆ ಸಹಿಸುವುದು ಸೂಕ್ತವಲ್ಲ’

0

ಬೆಳಗಾವಿ: ಹಿಂಸೆ ಮತ್ತು ಶೋಷಣೆ ಕೇವಲ ಶಾರೀರಿಕವಾಗಿ ಮಾತ್ರ ಇರುವುದಿಲ್ಲ. ಬೌದ್ಧಿಕ ಮತ್ತು ಮಾನಸಿಕವಾಗಿ ಕೂಡಾ ಅತ್ಯಾಚಾರ ಮತ್ತು ಶೋಷಣೆಯನ್ನು ಮಹಿಳೆ ಎದುರಿಸುತ್ತಿದ್ದಾಳೆ. ಸಮಾಜದ ಕ್ರೂರ ವ್ಯಕ್ತಿಗಳಿಂದ ಮಾತ್ರವಲ್ಲ, ಮನೆಯ ಸದಸ್ಯರಿಂದಲೂ ಕೂಡಾ ಮಹಿಳೆಯರ ಮೇಲೆ ಶೋಷಣೆ ನಡೆಯುತ್ತದೆ. ಮನೆಯ ಮರ್ಯಾದೆ ಉಳಿಸಲು ಮಹಿಳೆಯರು ತಮ್ಮ ಮೇಲೆ ಉಂಟಾಗುವ ಶೋಷಣೆಗಳನ್ನು ಸಹಿಸುವುದು ತರವಲ್ಲ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ. ಮುಕ್ತಾ ಆದಿ ಹೇಳಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮಹಿಳಾ ಸಬಲೀಕರಣ ಘಟಕದ ನೇತೃತ್ವದಲ್ಲಿ ಗುರುವಾರ ವಿವಿಯ ಕುವೆಂಪು ಸಭಾಭವನದಲ್ಲಿ ಜರುಗಿದ ಮಹಿಳೆಯರ ವಿರುದ್ಧದ ಶೋಷಣೆ ನಿವಾರಣಾ ಜಾಗತಿಕ ದಿನ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತ್ಯೇಕ ಮಹಿಳೆ ಮತ್ತು ಸುಶಿಕ್ಷತ ಸಮಾಜ ಮಹಿಳೆಯ ಮೇಲೆ ಆಗುವ ಶೋಷಣೆ ವಿರುದ್ಧ ಹೋರಾಡಬೇಕು. ಸಮಾಜದಲ್ಲಿ ಮಹಿಳೆಯರ ಮೇಲೆ ಜರುಗುವ ಶೋಷಣೆಗಳ ವಿರುದ್ಧ ವಿವಿಧ ಆಯಾಮಗಳಲ್ಲಿ ಹೋರಾಟ ಮಾಡುವುದರ ಮೂಲಕ ಮಹಿಳೆಯರ ಸುರಕ್ಷತೆಗಾಗಿ ಶ್ರಮಿಸಬೇಕು. ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ತಾವೇ ಸ್ವತಃ ಹೋರಾಡಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಅವರು ಜಾಗತಿಕವಾಗಿ ಮಹಿಳೆಯರ ಮೇಲೆ ನಡೆಯುವ ಶೋಷಣೆಗಳ ಕುರಿತಾಗಿ ಸವಿವಿರ ಮಾಹಿತಿ ನೀಡಿದರು.
ಕರ್ನಾಟಕ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಅಧ್ಯಾಪಕಿ ಮತ್ತು ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿ ಪ್ರೊ.ಶಕುಂತಲಾ ಶೆಟ್ಟರ ಮಾತನಾಡಿ, ಮಹಿಳಾ ಸಬಲೀಕರಣ ಕುರಿತಾಗಿ ಮಾತನಾಡಿದರು. ಡಾ. ಸುಷ್ಮಾ. ಆರ್ ವಿಶ್ವವಿದ್ಯಾಲಯದಲ್ಲಿ ಅಳವಡಿಸಲಾದ ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮಷಿನ್ ಸೌಲಭ್ಯದ ಬಳಕೆ ಕುರಿತಂತೆ ವಿದ್ಯಾರ್ಥಿನಿಯರಿಗೆ ಡೆಮೋ ನೀಡಿದರು.
ವಿವಿಧ ವಿಭಾಗದ ವಿದ್ಯಾರ್ಥಿನಿಯರು ಮಹಿಳಾ ಶೋಷಣೆ ನಿವಾರಣೆ ಕುರಿತಂತೆ ವಿಡಿಯೋ ಮತ್ತು ಪಿಪಿಟಿ ಪ್ರದರ್ಶನ ಸ್ಪರ್ಧೆ ಕೂಡಾ ಜರುಗಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ವಿವಿಧ ವಿಭಾಗಗಳ ವಿದ್ಯಾರ್ಥಿನಿಯರು ಚಿತ್ರ ಮತ್ತು ವಿಡಿಯೋಗಳನ್ನು ಬಳಿಸಿ ಮಾರ್ಮಿಕವಾಗಿ ಸಭಿಕರಿಗೆ ತಿಳಿಸಿದರು. ಪ್ರೊ. ಮುಕ್ತಾ ಆದಿ, ಡಾ.ಮೈತ್ರಾಯಿಣಿ ಗದಿಗೆಪ್ಪಗೌಡರ ಮತ್ತು ಡಾ.ಮಾಹೇಶ್ವರಿ ಕಾಚಾಪುರ ಸ್ಪರ್ಧೆಯ ನಿರ್ಣಾಯಕರಾಗಿದ್ದರು. ಸ್ಪರ್ಧೆಯಲ್ಲಿ ಕಂಪ್ಯೂಟರ್ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರ ತಂಡ ಪ್ರಥಮ ಸ್ಥಾನ ಪಡೆದರೆ, ದ್ವಿತೀಯ ಸ್ಥಾನ ಇಂಗ್ಲೀಷ್ ವಿಭಾಗ ಮತ್ತು ತೃತೀಯ ಸ್ಥಾನ ಅಪರಾಧ ಮತ್ತು ನ್ಯಾಯಿಕ ಶಾಸ್ತ್ರ ವಿಭಾಗದ ವಿದ್ಯಾರ್ಥಿನಿಯರ ತಂಡ ಪಡೆಯಿತು.
ಪ್ರೊ. ಪೂಜಾ ಹಲ್ಯಾಳ ಸ್ವಾಗತಿಸಿದರು. ಪ್ರೊ. ಮನಿಷಾ ನೇಸರಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಕೆ.ಬಿ. ಚಂದ್ರಿಕಾ ಅನಿಸಿಕೆ ತಿಳಿಸಿದರು. ಪ್ರೊ.ಯಾಸಿನ್ ಬೆಗಂ ನದಾಫ್ ಪರಿಚಯಿಸಿದರು. ಡಾ, ಮಲ್ಲಮ್ಮಾ ರೆಡ್ಡಿ ನಿರೂಪಿಸಿದರು. ಡಾ.ಸುಷ್ಮಾ ಆರ್ ವಂದಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.