ಉತ್ತಮ ಸಮಾಜಕ್ಕಾಗಿ

ಪ್ರಕಟಣೆಗಳು

0

ಡಿ.6 ರಂದು ನಿರ್ಗಮನ ಪಥಸಂಚಲನ
ಬೆಳಗಾವಿ: ನಗರದ ಕಂಗ್ರಾಳಿಯಲ್ಲಿರುವ ಕೆ.ಎಸ್.ಆರ್.ಪಿ ಪೊಲೀಸ್ ತರಬೇತಿ ಶಾಲೆಯಲ್ಲಿ ಡಿಸೆಂಬರ್.6 ರಂದು ಬೆಳಿಗ್ಗೆ 8 ಗಂಟೆಗೆ ಕರ್ನಾಟಕ ರಾಜ್ಯ ಮಹಿಳಾ ಮತ್ತು ಪುರುಷ ಸ್ಪೆಷಲ್ ರಿಸರ್ವ ಪೊಲೀಸ್ ಕಾನ್ಸ್‍ಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಭಾಗವಹಿಸಿ ಪಥಸಂಚಲನದ ಪರಿವೀಕ್ಷಣೆ ಹಾಗೂ ಬಹುಮಾನ ವಿತರಣೆ ಮಾಡುವರು. ಗೃಹ ಸಚಿವರ ಸಲಹೆಗಾರರಾದ ಕೆಂಪಯ್ಯ, ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಆರಕ್ಷಕ ಮಹಾನಿರೀಕ್ಷಕರಾದ ಶ್ರೀಮತಿ ನೀಲಮಣಿ.ಎನ್. ರಾಜು, ಕೆ.ಎಸ್.ಆರ್.ಪಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಭಾಸ್ಕರ್‍ರಾವ್ ಇನ್ನಿತರ ಗಣ್ಯರು ಪಾಲ್ಗೊಳ್ಳುವರು ಎಂದು ಕೆ.ಎಸ್.ಆರ್.ಪಿ ತರಬೇತಿ ಶಾಲೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ.6 ರಿಂದ 18 ರವರೆಗೆ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ
ಬೆಳಗಾವಿ: ಡಿಸೆಂಬರ್ 04 (ಕರ್ನಾಟಕ ವಾರ್ತೆ): ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಅವರನ್ನು ಮುಖ್ಯ ವಾಹಿನಿಗೆ ಸೇರಿಸಲು 2018-19ನೇ ಸಾಲಿನ ಸರ್ವ ಶಿಕ್ಷಣ ಅಭಿಯಾನದ ವಾರ್ಷಿಕ ಕ್ರಿಯಾ ಯೋಜನೆ ಸಿದ್ಧಪಡಿಸುವುದಕ್ಕಾಗಿ ಶಾಲೆಯಿಂದ ಹೊರಗುಳಿದ ಮಕ್ಕಳ ನಿಖರವಾದ, ವಸ್ತುನಿಷ್ಠ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದ್ದು ಈ ಕುರಿತು ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಯನ್ನು ಎಲ್ಲ ಆಡಳಿತ ಮಂಡಳಿಗಳ ಶಾಲೆಗಳಲ್ಲಿ ಮತ್ತು ಜನವಸತಿ ಪ್ರದೇಶಗಳಲ್ಲಿ ಡಿಸೆಂಬರ್.5 ರಿಂದ 18 ರವರೆಗೆ ಹಮ್ಮಿಕೊಳ್ಳಲಾಗಿದೆ.
ಆಸಕ್ತ ಸ್ಥಳೀಯ ಸಂಘ, ಸಂಸ್ಥೆಗಳು, ಸರ್ಕಾರಿ ಇಲಾಖೆಯವರು, ಎಲ್ಲ ಹಂತದ ಜನಪ್ರತಿನಿಧಿಗಳು, ಶಿಕ್ಷಣ ಆಸಕ್ತರು ಹಾಗೂ ಪಾಲಕ, ಪೋಷಕರು ಶಾಲೆಯಿಂದ ಹೊರಗುಳಿದ ಮಕ್ಕಳು ತಮ್ಮ ಗಮನಕ್ಕೆ ಬಂದಲ್ಲಿ ಸಮೀಪದ ಶಾಲೆಯ ಬಿ.ಆರ್.ಸಿ ಹಾಗೂ ಬಿ.ಇ.ಒ ಕಚೇರಿಯ ಗಮನಕ್ಕೆ ತಂದು ಇಲಾಖೆಯೊಂದಿಗೆ ಸಹಕರಿಸಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಅವರಿಗೆ ಸಿಗಬೇಕಾದ ಕಡ್ಡಾಯ ಪ್ರಾಥಮಿಕ ಶಿಕ್ಷಣದ ಹಕ್ಕನ್ನು ನೀಡಲು ಸಹಕರಿಸಬೇಕೆಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಬೆಳಗಾವಿ ನಗರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ.16 ರಿಂದ 18 ರವರೆಗೆ ಫಲಪುಷ್ಪ ಪ್ರದರ್ಶನ
ಬೆಳಗಾವಿ:  ಇಲ್ಲಿನ ಕ್ಲಬ್ ರೋಡ್‍ನ ಹ್ಯೂಮ್ ಪಾರ್ಕ್‍ನಲ್ಲಿ ಡಿಸೆಂಬರ್.16 ರಿಂದ 18 ರವರೆಗೆ 2017-18ನೇ ಸಾಲಿನ 60ನೇ ಫಲಪುಷ್ಪ ಪ್ರದರ್ಶನ ನಡೆಯಲಿದೆ.
ಪ್ರದರ್ಶನದ ವೇಳೆಯಲ್ಲಿ ಕೃಷಿ ಸಂಬಂಧ ಮಾರಾಟ ಮಳಿಗೆಗಳಿಗೆ (10ಘಿ10 ಅಳತೆ) ಸ್ಥಳಾವಕಾಶ ನೀಡಲಾಗುತ್ತಿದ್ದು, ಆಸಕ್ತರು ಡಿಸೆಂಬರ್.11 ರೊಳಗಾಗಿ ‘ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾಜ್ಯ ವಲಯ) ಬೆಳಗಾವಿ’ ಈ ಕಚೇರಿಯಲ್ಲಿ ಐದು ಸಾವಿರ ರೂ. ಶುಲ್ಕ ಪಾವತಿಸಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ದೂ: 0831-2451422 ಸಂಖ್ಯೆಗೆ ಸಂಪರ್ಕಿಸಬೇಕೆಂದು ಜಿಲ್ಲಾ ತೋಟಗಾರಿಕೆ ಸಂಘದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ.17 ರಂದು ಚಿತ್ರಕಲಾ ಸ್ಪರ್ಧೆ: ಹೆಸರು ನೋಂದಾಯಿಸಲು ಸೂಚನೆ
ಬೆಳಗಾವಿ:  ನಗರದ ಭಾರತ ಕಾಲನಿಯ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಸಭಾಗೃಹದಲ್ಲಿ ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ, ಮಹಿಳಾ ಕಲ್ಯಾಣ ಸಂಸ್ಥೆಯ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ ಹಾಗೂ ಸೇವಾಮಿತ್ರ ಸಮಾಜಕಾರ್ಯ ಮಹಾವಿದ್ಯಾಲಯದ ಎನ್‍ಎಸ್‍ಎಸ್ ಘಟಕದ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆಯ ಅಂಗವಾಗಿ ಡಿಸೆಂಬರ್.17 ರಂದು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ವಿದ್ಯಾರ್ಥಿಗಳು ಗ್ರಾಹಕರ ಹಕ್ಕುಗಳು ಮತ್ತು ಕರ್ತವ್ಯಗಳು ಅಥವಾ ಡಿಜಿಟಲ್ ಇಂಡಿಯಾ ವಿಷಯದ ಮೇಲೆ ಚಿತ್ರ ಬಿಡಿಸಬಹುದು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ, ದ್ವಿತಿಯ, ತೃತೀಯ ಬಹುಮಾನ ಮತ್ತು ಪ್ರಶಸ್ತಿ ಪತ್ರ ಹಾಗೂ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರ ನೀಡಲಾಗುವುದು. ವಿದ್ಯಾರ್ಥಿಗಳು ತಮ್ಮ ಹೆಸರು ನೋಂದಾಯಿಸಲು

ಹಾಗೂ ಹೆಚ್ಚಿನ ಮಾಹಿತಿಗೆ ಮೊ: 9742460204.ಗೆ ಸಂಪರ್ಕಿಸಬೇಕೆಂದು ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಸಂಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಜಿ ಆಹ್ವಾನ
ಬೆಳಗಾವಿ: ಸಹಕಾರ ಯೋಜನೆಯು ಎಲ್ಲ ಮಾದರಿಯ ಪಡಿತರ ಚೀಟಿದಾರರಿಗೆ ಶೈಕ್ಷಣಿಕ, ಸ್ವ ಉದ್ಯೋಗ, ಆರ್ಥಿಕ, ಸರ್ಕಾರಿ ನೇಮಕಾತಿ, ಕಾನೂನು, ಆರೋಗ್ಯ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ನೆರವನ್ನು ನೀಡುವುದರ ಜೊತೆಗೆ ರಾಜ್ಯ ಸರಕಾರ ಹಾಗೂ ಕೇಂದ್ರ ಸರ್ಕಾರದ ಎಲ್ಲ ಇಲಾಖೆಗಳ ಕಾರ್ಯಕ್ರಮಗಳು, ಪ್ರಕಟಣೆಗಳು ಮತ್ತು ಯೋಜನೆಗಳ ಸಮರ್ಪಕ ಮಾಹಿತಿಯನ್ನು ನೀಡಿ ಯೋಜನೆಗಳ ಸದುಪಯೋಗ ಪಡೆಯಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತಿದ್ದು, ಈ ಯೋಜನೆಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸಲು ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.
ಆಸಕ್ತ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳು ದೂ: 08394-230054 ಅಥವಾ 7996781654 ಸಂಖ್ಯೆಗೆ ಸಂಪರ್ಕಿಸಿ ಅರ್ಜಿ ಸಲ್ಲಿಸುವುದರ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಸಹಕಾರ ಯೋಜನೆಯ ದೂ: 8880099290 ಸಂಖ್ಯೆಗೆ ಸಂಪರ್ಕಿಸಬೇಕೆಂದು ಸಹಕಾರ ಯೋಜನೆಯ ಮುಖ್ಯ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.