ಉತ್ತಮ ಸಮಾಜಕ್ಕಾಗಿ

ನಿರ್ಗಮನ ಪಥಸಂಚಲನ ಪೊಲೀಸ್ ಸಿಬ್ಬಂದಿಗೆ 11 ಸಾವಿರ ಮನೆಗಳನ್ನು ನಿರ್ಮಿಸುವ ಗುರಿ; ಸಚಿವ ರಾಮಲಿಂಗಾರೆಡ್ಡಿ

0

ಬೆಳಗಾವಿ: ನಮ್ಮ ಸರಕಾರದ ನಾಲ್ಕೂವರೆ ವರ್ಷದ ಆಡಳಿತದಲ್ಲಿ 28 ಸಾವಿರಕ್ಕಿಂತ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭರ್ತಿ ಮಾಡಿಕೊಳ್ಳಲಾಗಿದೆ ಎಂದು ಗೃಹಸಚಿವ ರಾಮಲಿಂಗಾರೆಡ್ಡಿ ಅವರು ತಿಳಿಸಿದರು.
ನಗರದ ಕಂಗ್ರಾಳಿಯಲ್ಲಿರುವ ಕೆ.ಎಸ್.ಆರ್.ಪಿ ತರಬೇತಿ ಶಾಲೆಯ ಆವರಣದಲ್ಲಿ ಬುಧವಾರ (ನ.6) ಹಮ್ಮಿಕೊಂಡಿದ್ದ ಮಹಿಳಾ ಮತ್ತು ಪುರುಷ ಸ್ಪೆಷಲ್ ರಿಸರ್ವ್ ಪೊಲೀಸ್ ಕಾನ್ಸ್‍ಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸದ್ಯ ಪೊಲೀಸ್ ಇಲಾಖೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದು. ರಾಜ್ಯದ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರದಿಂದ ಪೊಲೀಸ್ ಸಿಬ್ಬಂದಿಗೆ ವಸತಿಗಾಗಿ ರೂ.2273 ಕೋಟಿ ವೆಚ್ಚದಲ್ಲಿ ಒಟ್ಟು 11 ಸಾವಿರ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿತ್ತು. ಸದ್ಯ ಎರಡು ಸಾವಿರಕ್ಕೂ ಅಧಿಕ ಮನೆಗಳನ್ನು ನಿರ್ಮಿಸಲಾಗಿದೆ. 2020 ರ ವೇಳೆಗೆ ಎಲ್ಲ ಮನೆಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಪದವಿ, ಸ್ನಾತಕೋತ್ತರ ಪದವಿ ಸೇರಿದಂತೆ ಇನ್ನಿತರ ಹೆಚ್ಚಿನ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಪೊಲೀಸ್ ಇಲಾಖೆಗೆ ಕರ್ತವ್ಯಕ್ಕೆ ಸೇರುತ್ತಿರುವುದು ಸಂತಸದ ಸಂಗತಿಯಾಗಿದೆ. ಕೆ.ಎಸ್.ಆರ್.ಪಿ ಸಿಬ್ಬಂದಿ ಉತ್ತಮ ಸೇವೆಯನ್ನು ಒದಗಿಸುತ್ತಿದ್ದು, ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಹೊಸದಾಗಿ ಕೆಲಸಕ್ಕೆ ಸೇರುತ್ತಿರುವ ಪ್ರಶಿಕ್ಷಣಾರ್ಥಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿರುವಂತೆ ತಮ್ಮ ಸೇವಾವಧಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರಾದ ಶ್ರೀಮತಿ ನೀಲಮಣಿ.ಎನ್. ರಾಜು ಅವರು ಮಾತನಾಡಿ, ಸರ್ಕಾರದಿಂದ 1900 ಪೊಲೀಸ್ ಸಿಬ್ಬಂದಿಗಳ ನೇಮಕಾತಿಗೆ ಈಗಾಗಲೇ ಪ್ರಕ್ರಿಯೆ ಚಾಲನೆಯಲ್ಲಿದೆ. ಜೊತೆಗೆ 6300 ಪೊಲೀಸ್ ಸಿಬ್ಬಂದಿಯ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಒಟ್ಟು 11 ಕೆ.ಎಸ್.ಆರ್.ಪಿ ತರಬೇತಿ ಶಾಲೆಗಳು ಇದ್ದು ಈಗ ನೂತನವಾಗಿ ತುಮಕೂರಿನಲ್ಲಿ 12ನೇ ಪೊಲೀಸ್ ತರಬೇತಿ ಶಾಲೆಯನ್ನು ಆರಂಭಿಸಲಾಗುತ್ತಿದೆ. ಕೆ.ಎಸ್.ಆರ್.ಪಿ ಬಸ್‍ಗಳಲ್ಲಿ ಶೀಘ್ರವೇ ಶೌಚಾಲಯದ ವ್ಯವಸ್ಥೆ ಮಾಡಲಾಗುವುದು ಹಾಗೂ ಪೊಲೀಸ್ ಸಿಬ್ಬಂದಿಗಾಗಿ ಮೊಬೈಲ್ ಶೌಚಾಲಯವನ್ನು ನಿರ್ಮಿಸಲಾಗುವುದು ಎಂದು ಅವರು ಹೇಳಿದರು.
ಕಾನ್‍ಸ್ಟೇಬಲ್‍ಗಳನ್ನು ಹೆಡ್‍ಕಾನ್‍ಸ್ಟೇಬಲ್‍ಗಳನ್ನಾಗಿ ಬಡ್ತಿ ಮಾಡುವಾಗ ಅಗತ್ಯ ತರಬೇತಿ ನೀಡಿ ಭರ್ತಿ ಮಾಡಲಾಗುವುದು. ಬ್ಯಾಂಡ್ ತಂಡಗಳನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಬ್ಯಾಂಡ್ ತಂಡಕ್ಕೆ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಪ್ರತ್ಯೇಕ ನೇಮಕಾತಿ ನಡೆಸಲು ಚಿಂತಿಸಲಾಗುತ್ತಿದೆ ಎಂದು ತಿಳಿಸಿದರು.
ಇದಕ್ಕೂ ಮೊದಲು ಗೃಹಸಚಿವ ರಾಮಲಿಂಗಾರೆಡ್ಡಿ ಅವರು ತೆರೆದ ವಾಹನದಲ್ಲಿ ಕವಾಯತು ಪರಿವೀಕ್ಷಣೆ ಮಾಡಿದರು. ಮಹಿಳಾ ಮತ್ತು ಪುರುಷ ಸ್ಪೆಷಲ್ ರಿಸರ್ವ್ ಪೊಲೀಸ್ ಕಾನ್ಸ್‍ಟೇಬಲ್ ಪ್ರಶಿಕ್ಷಣಾರ್ಥಿಗಳು ಆಕರ್ಷಕ ಪಥಸಂಚಲನ ನಡೆಸಿದರು. ರಾಷ್ಟ್ರಧ್ವಜ ಮತ್ತು ಪೊಲೀಸ್ ಧ್ವಜಗಳಿಗೆ ಗೌರವ ಸಲ್ಲಿಸಲಾಯಿತು. ವಾಧ್ಯಮೇಳದವರು ಲಯಬದ್ಧವಾಗಿ ವಾಧ್ಯಗಳನ್ನು ನುಡಿಸಿ ಪಥಸಂಚಲನಕ್ಕೆ ಮೆರಗು ತಂದರು.
ಕೆ.ಎಸ್.ಆರ್.ಪಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಭಾಸ್ಕರ್ ರಾವ್ ಅವರು ಸ್ವಾಗತಿಸಿದರು. ಬೆಳಗಾವಿಯ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾದ ಎನ್. ಜಗದೀಶ ಅವರು ವರದಿ ವಾಚನ ಮಾಡಿದರು.

ಬೆಳಗಾವಿ ಉತ್ತರ ವಲಯ ಐಜಿಪಿ ಡಾ. ಕೆ.ರಾಮಚಂದ್ರರಾವ್, ಐಜಿಪಿ ಚರಣರೆಡ್ಡಿ, ಎಸ್‍ಪಿ ರವಿಕಾಂತೇಗೌಡ, ಪ್ರಾದೇಶಿಕ ಆಯುಕ್ತರಾದ ಶಿವಯೋಗಿ ಕಳಸದ, ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ, ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಣಾ ಅಧಿಕಾರಿ ರಾಮಚಂದ್ರನ್. ಆರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಕೇಂದ್ರೀಯ ರಕ್ಷಣಾ ವಿಭಾಗದ ಕಮಾಂಡೆಂಟ್‍ಗಳು, ಪ್ರಶಿಕ್ಷಣಾರ್ಥಿಗಳ ಪಾಲಕರು ಸೇರಿದಂತೆ ಸಾವಿರಾರು ಜನರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಮೈನವಿರೇಳಿಸಿದ ಟೆಂಟ್ ಪೆಗ್ಗಿಂಗ್ ಪ್ರದರ್ಶನ:
ಇದೇ ಪ್ರಥಮ ಬಾರಿಗೆ ಬೆಳಗಾವಿಯಲ್ಲಿ ಪೊಲೀಸ್ ಇಲಾಖೆಯಿಂದ ಟೆಂಟ್ ಪೆಗ್ಗಿಂಗ್ ಪ್ರದರ್ಶನ ಜರುಗಿತು. ಕರ್ನಾಟಕ ರಾಜ್ಯ ಮೈಸೂರು ಅಶ್ವಾರೋಹಿ ತಂಡದ ಸದಸ್ಯರು ಆಕರ್ಷಕವಾಗಿ ಟೆಂಟ್ ಪೆಗ್ಗಿಂಗ್ ಪ್ರದರ್ಶನ ನೀಡಿ ನೋಡುಗರ ಮೈನವಿರೇಳುವಂತೆ ಮಾಡಿದರು. ಒಟ್ಟು ಆರು ಸದಸ್ಯರು, ಆರು ಕುದುರೆಗಳ ಮೂಲಕ ವಿವಿಧ ಬಗೆಯ ಸಾಹಸಗಳನ್ನು ಪ್ರದರ್ಶಿಸಿ ನರೆದಿದ್ದವರನ್ನು ರಂಜಿಸಿದರು.
ಬಹುಮಾನ ವಿತರಣೆ:
ತರಬೇತಿಯಲ್ಲಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಬೆಳಗಾವಿ ಕೆಎಸ್‍ಆರ್‍ಪಿ ತರಬೇತಿ ಶಾಲೆಯ ತಂಡದ ಹೊರಾಂಗಣ ಆಟಗಳಲ್ಲಿ ಪುಂಡಲೀಕ ನಾಯಕ ಪ್ರಥಮ ಸ್ಥಾನ, ಗುಂಡು ಹಾರಿಸುವ ಸ್ಪರ್ಧೆಯಲ್ಲಿ ರಾಮನಿಂಗ ಕುರಬೇಟ್ ಪ್ರಥಮ ಸ್ಥಾನ, ಒಳಾಂಗಣ ಆಟಗಳಲ್ಲಿ ಸದ್ದಾಂ ಹುಸೇನ ಮುಲ್ಲಾ ಪ್ರಥಮ ಸ್ಥಾನ ಹಾಗೂ ಸರ್ವೋತ್ತಮ ಪ್ರಶಸ್ತಿಗೆ ಭಾಜನರಾದರು.
ಬೆಂಗಳೂರು ಕೆಎಸ್‍ಆರ್‍ಪಿ 4ನೇ ಪಡೆಯ ಒಳಾಂಗಣ ಆಟಗಳಲ್ಲಿ ಶ್ರೀಮತಿ ಸೌಮ್ಯಶ್ರೀ ಪ್ರಥಮ, ಗುಂಡು ಹಾರಿಸುವ ಸ್ಪರ್ಧೆಯಲ್ಲಿ ಮಹಾದೇವಿ ಕಾರಿಮನಿ ಪ್ರಥಮ, ಹೊರಾಂಗಣ ಆಟಗಳಲ್ಲಿ ಶ್ರೀಮತಿ ಶ್ವೇತಾ ಪ್ರಥಮ ಹಾಗೂ ಸರ್ವೋತ್ತಮ ಪ್ರಶಸ್ತಿಯನ್ನು ಪಡೆದುಕೊಂಡರು.
ಹಾಸನ ಕೆಎಸ್‍ಆರ್‍ಪಿ 11ನೇ ಪಡೆಯ ಹೊರಾಂಗಣ ಆಟಗಳಲ್ಲಿ ಆಕಾಶ ಮೇದಾರ ಪ್ರಥಮ, ಒಳಾಂಗಣ ಆಟಗಳಲ್ಲಿ ಅವಿನಾಶ ನಾಯ್ಕ ಪ್ರಥಮ, ಗುಂಡು ಹಾರಿಸುವ ಸ್ಪರ್ಧೆಯಲ್ಲಿ ಸಂಗಪ್ಪ ಶೀಲವಂತರ ಪ್ರಥಮ ಹಾಗೂ ಸರ್ವೋತ್ತಮ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
344 ಪ್ರಶಿಕ್ಷಣಾರ್ಥಿಗಳಿಗೆ ಬೀಳ್ಕೊಡುಗೆ:
285 ಪುರುಷ ಹಾಗೂ 59 ಮಹಿಳಾ ಪ್ರಶಿಕ್ಷಣಾರ್ಥಿಗಳು ಸೇರಿದಂತೆ ಒಟ್ಟು 344 ಕೆಎಸ್‍ಆರ್‍ಪಿ ಪ್ರಶಿಕ್ಷಣಾರ್ಥಿಗಳು ನಿರ್ಗಮನ ಪಥಸಂಚಲನದಲ್ಲಿ ಭಾಗವಹಿಸಿದ್ದರು. ಅವರಲ್ಲಿ 20 ಅಭ್ಯರ್ಥಿಗಳು ಸ್ನಾತಕೋತ್ತರ ಪದವೀಧರರು, 190 ಪದವೀಧರರು, 116 ಪಿಯುಸಿ ಹಾಗೂ 18 ಅಭ್ಯರ್ಥಿಗಳು ಎಸ್ಸೆಸ್ಸೆಲ್ಸಿ ಶಿಕ್ಷಣ ಪಡೆದವರಾಗಿದ್ದಾರೆ.
ಬೆಳಗಾವಿ ಜಿಲ್ಲೆಯ-92, ವಿಜಯಪುರ-33, ಕಲಬುರಗಿ-22 ಸೇರಿದಂತೆ ರಾಜ್ಯದ ಇತರೆ ಜಿಲ್ಲೆಗಳ 197 ಪ್ರಶಿಕ್ಷಣಾರ್ಥಿಗಳು ನಿರ್ಗಮನ ಪಥಸಂಚಲನದಲ್ಲಿ ಪಾಲ್ಗೊಂಡು ಸತತ 9 ತಿಂಗಳವರೆಗೆ ತರಬೇತಿ ಪಡೆದು ಇಂದು ಬೀಳ್ಕೊಡುಗೆ ಪಡೆದರು.

Leave A Reply

 Click this button or press Ctrl+G to toggle between Kannada and English

Your email address will not be published.