ಉತ್ತಮ ಸಮಾಜಕ್ಕಾಗಿ

ಸಂಕಲ್ಪ ದಿನಾಚರಣೆ ಜನಮನ ಗೆದ್ದಿದೆ: ಸತೀಶ ಜಾರಕೀಹೊಳಿ

0

ಬೆಳಗಾವಿ: ನನ್ನ ಬಗ್ಗೆ ಶಂಕರ ಮುನವಳ್ಳಿ ಹೇಳಿದ್ದನ್ನು ಸಲಹೆಯಾಗಿ ಸ್ವೀಕರಿಸಿ ಕಾರಿನ ಬದಲು ವೇದಿಕೆಯಲ್ಲಿ ಮಲಗಿ ಸ್ಮಶಾನದಲ್ಲಿ ರಾತ್ರಿ ಕಳೆದಿದ್ದೇನೆ. ಸಮಾಜವನ್ನು ಮೌಢ್ಯದಿಂದ ಮುಕ್ತಗೊಳಿಸುವ ಕಾರ್ಯಕ್ರಮ ನಿಲ್ಲುವುದಿಲ್ಲ. ಕಲ್ಯಾಣ ಕರ್ನಾಟಕ ನಮ್ಮ ಗುರಿಯಾಗಿದೆ ಎಂದು ಎಐಸಿಸಿ ಕಾರ್ಯದರ್ಶಿ, ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ಮಾನವ ಬಂಧುತ್ವ ವೇದಿಕೆಯಿಂದ ಡಾ.ಅಂಬೇಡ್ಕರ್ ಮಹಾಪರಿನಿರ್ವಾಣ ದಿನಾಚರಣೆ ನಿಮಿತ್ತ ಬೆಳಗಾವಿ ಬುದ್ದ, ಬಸವ, ಅಂಬೇಡ್ಕರ್ ಶಾಂತಿಧಾಮದಲ್ಲಿ ನಡೆದ ಮೌಢ್ಯ ವಿರೋಧಿ ಸಂಕಲ್ಪ ದಿನಾಚರಣೆಯಲ್ಲಿ ಪಾಲ್ಗೊಂಡು 24 ಗಂಟೆ ಸ್ಮಶಾನದಲ್ಲಿ ಕಳೆದ ನಂತರ ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸ್ಮಶಾನದಲ್ಲಿ ಮೌಢ್ಯ ವಿರೋಧಿ ಸಂಕಲ್ಪ ದಿನಾಚರಣೆ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಗೆ ದೂರು ನೀಡಲಾಗಿದೆ. ಆದರೆ ಇದು ಸದುದ್ದೇಶದ ದೂರು ಅಲ್ಲ ಎಂಬುದನ್ನು ಮನವರಿಕೆ ಮಾಡಿಕೊಂಡ ನಂತರ ಕಾಂಗ್ರೆಸ್ ನಾಯಕರು ಈ ದೂರನ್ನು ಗಂಭೀರವಾಗಿ ಪರಿಗಣಿಸಿಲ್ಲ. ಈ ಕುರಿತು ನನ್ನ ಜೊತೆ ಯಾವ ವಿಚಾರವನ್ನು ಮಾತನಾಡಿಯೂ ಇಲ್ಲ ಎಂದು ಶಾಸಕ ಸತೀಶ ಸ್ಪಷ್ಟಪಡಿಸಿದರು. ತಮ್ಮ 20 ವರ್ಷದ ರಾಜಕೀಯ ಜೀವನದ ಏಳು ಬೀಳುಗಳಲ್ಲಿ ಏಳ್ಗೆಯನ್ನೇ ಹೆಚ್ಚು ಕಂಡಿರುವ ಮತ್ತು ಅಧಿಕಾರ ಅನುಭವಿಸಿರುವ ತಾವು ಮತ್ತಷ್ಟು ಮಹತ್ವಾಕಾಂಕ್ಷೆಗಳ ಬೆನ್ನು ಬೀಳುವುದಿಲ್ಲ. ಸಾಮರ್ಥ್ಯ ಇದ್ದಲ್ಲಿ ಅಧಿಕಾರ ಬಂದೇ ಬರುತ್ತದೆ. ಜೊತೆಗೆ  ಅಧಿಕಾರ ಶಾಶ್ವತವೆಂಬ ಭ್ರಮೆಯೂ ನನಗಿಲ್ಲ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗುವುದು ನಿಶ್ಚಿತವಾಗಿದೆ. ಇದರಲ್ಲಿ ಯಾವ ಅಡೆತಡೆಯೂ ಇಲ್ಲ. ಪಕ್ಷದಲ್ಲಿ ಬಹುತೇಕ ಎಲ್ಲರ ಬೆಂಬಲ ಅವರಿಗೆ ಇದೆ ಎಂದು ಶಾಸಕ ಸತೀಶ ಜಾರಕಿಹೊಳಿ ತಿಳಿಸಿದರು. ಒಟ್ಟಾರೆಯಾಗಿ ಬೆಳಗಾವಿಯಲ್ಲಿ ನಡೆದ ಮೌಢ್ಯ ವಿರೋಧಿ ಸಂಕಲ್ಪ ದಿನಾಚರಣೆ ವೈಚಾರಿಕ ಜಾಗೃತಿ ಜಾತ್ರೆಯಾಗಿ ಜನಮನ ಗೆದ್ದಿದೆ. ನಾಡಿನ ಮೂಲೆ ಮೂಲೆಗಳಿಂದ ಜಾಥಾಗಳಲ್ಲಿ ಆಗಮಿಸಿದ್ದ 50 ಸಾವಿರಕ್ಕೂ ಹೆಚ್ಚು ಜನರು ಮೌಢ್ಯ ವಿರೋಧಿ ಸಂಕಲ್ಪ ದಿನಾಚರಣೆಯಲ್ಲಿ ಪಾಲ್ಗೊಂಡು ಸಮಾಜದಲ್ಲಿ ಬದಲಾವಣೆಯ ಅಗತ್ಯವನ್ನು ಮನಗಂಡಿದ್ದಾರೆ. ಸಮಾಜವನ್ನು ಜಾಗೃತಗೊಳಿಸುವ ಕೆಲಸದಲ್ಲಿ ಸಾಹಿತಿಗಳು, ಬುದ್ಧಿಜೀವಿಗಳು, ಸ್ವಾಮೀಜಿಗಳು, ಚಿತ್ರನಟರು, ನಾಡಿನ ಎಲ್ಲ ಕ್ಷೇತ್ರಗಳ ಜನರು ಪಾಲ್ಗೊಂಡು ಸಹಮತ ವ್ಯಕ್ತಪಡಿಸಿದ್ದಾರೆ. ಇದು ನಮ್ಮಲ್ಲಿರುವ ವಿಶ್ವಾಸ ಹೆಚ್ಚಿಸಿದೆ. ಸಮಾಜದಲ್ಲಿ ಬದಲಾವಣೆ ತರುವ ನಿಲುವನ್ನು ಗಟ್ಟಿಗೊಳಿಸಿದೆ ಎಂದು ಶಾಸಕ ಸತೀಶ ಜಾರಕಿಹೊಳಿ ತಿಳಿಸಿದರು.

ಎಐಸಿಸಿ ಕಾರ್ಯದರ್ಶಿ, ಶಾಸಕ ಸತೀಶ ಜಾರಕಿಹೊಳಿ ಅವರು ಸ್ಮಶಾನದಲ್ಲೇ ರಾತ್ರಿ 11 ಗಂಟೆಗೆ ಊಟ ಸೇವಿಸಿ, ಗಣ್ಯರು, ಕಾರ್ಯಕರ್ತರೊಂದಿಗೆ ಮುಕ್ತವಾಗಿ ಚರ್ಚೆ ನಂತರ ವೇದಿಕೆಯಲ್ಲಿ ನಿದ್ರೆಗೆ ಜಾರಿದರು. ಬೆಳಗ್ಗೆ 7.30 ಗಂಟೆಗೆ ಸ್ಮಶಾನದಿಂದ ಹೊರಬಂದ ಶಾಸಕ ಸತೀಶ ಜಾರಕಿಹೊಳಿ, ಕಾರ್ಯಕ್ರಮದ ಬಗ್ಗೆ ಜನರ ಅಭಿಪ್ರಾಯಗಳನ್ನೂ ಕೇಳಿ ತಿಳಿದು ಹರ್ಷ ವ್ಯಕ್ತಪಡಿಸಿದರು. ಮುಂದಿನ ಬಾರಿ ಸಂಕಲ್ಪ ದಿನಾಚರಣೆಯಲ್ಲಿ ಬರುವ ವರ್ಷ 60ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳಲಿದ್ದು, ರಾಷ್ಟ್ರ, ರಾಜ್ಯ ಮಟ್ಟದ ಚಿಂತಕರು, ಸ್ವಾಮೀಜಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

Leave A Reply

 Click this button or press Ctrl+G to toggle between Kannada and English

Your email address will not be published.