ಉತ್ತಮ ಸಮಾಜಕ್ಕಾಗಿ

ಬಿಲ್ ಕೊಡಿಸಿ: ರೈತರ ಪ್ರತಿಭಟನೆ

0

ಬೆಳಗಾವಿ: ಕಬ್ಬಿಗೆ SAP ಘೋಷಣೆ ಮಾಡಿ, ಜಿಲ್ಲೆಯಲ್ಲಿನ ಸಕ್ಕರೆ ಕಾರ್ಖಾನೆಗಳಿಂದ ಬಾಕಿ ಬಿಲ್ ಕೊಡಿಸಬೇಕೆಂದು ರೈತ ಸಂಘಟನೆಗಳು ಡಿಸಿ ಕಚೇರಿ ಎದುರು ಇಂದು ಬೃಹತ್ ಪ್ರತಿಭಟನೆ ನಡೆಸಿದವು. ಜಿಲ್ಲೆಯ ಸೌಭಾಗ್ಯ ಲಕ್ಷ್ಮೀ ಹಾಗೂ ಶಿವಸಾಗರ ಸಕ್ಕರೆ ಕಾರ್ಖಾನೆಗಳಿಂದ ಬಡ್ಡಿ ಸಹಿತ ಬಾಕಿ ಬಿಲ್ ಕೊಡಿಸಬೇಕೆಂದು ಜಿಲ್ಲಾಡಳಿತದ ಮೇಲೆ ಒತ್ತಡ ಹಾಕಲಾಯಿತು. ಹಲವಾರು ರೈತರ ಬಾಕಿ ಬಿಲ್ ಕಳೆದ ನಾಲ್ಕಾರು ವರ್ಷಗಳಿಂದ ಕೊಟ್ಟಿಲ್ಲ ಎಂದು ಜಿಲ್ಲಾಡಳಿತದ ಗಮನ ಸೆಳೆದರು.ಎಲ್ಲ ಕೃಷಿ ಉತ್ಪನ್ನಗಳಿಗೆ ಕೂಡಲೇ ಪರಿಷ್ಕೃತ ಬೆಲೆ ನಿಗದಿ ಮಾಡಿ, ಖರೀದಿ ಕೇಂದ್ರ ತೆರೆಯಬೇಕು. ಅತಿವೃಷ್ಠಿಯಿಂದ ಹಾನಿಗೊಳಗಾದ ಬೆಳೆಗಳಿಗೆ ಪರಿಹಾರ ನೀಡಬೇಕು. ಕೇಂದ್ರ ಸರಕಾರ ಡಾ. ಸ್ವಾಮಿನಾಥನ್ ವರದಿ ಜಾರಿಗೆ ತರಬೇಕು. ಜಿಲ್ಲೆಯ ನಂದಿಕುರಳಿ ಕೃಷರ್ ಮಶಿನ್ ತಕ್ಷಣ ಸ್ಥಗಿತಗೊಳಿಸಬೇಕು. ಕಳಸಾ ಬಂಡೂರಿ, ಬಸವೇಶ್ವರ ಏತ ನೀರಾವರಿ ಯೋಜನೆ, ಕರಗಾಂವ ಏತ ನೀರಾವರಿ ಯೋಜನೆ, ಲಕ್ಷ್ಮೇಶ್ವರ ಹಾಗೂ ಮಹಾಕಲ್ಮಿ ನೀರಾವರಿ ಯೋಜನೆಗಳನ್ನು ಸರಕಾರ ಆದ್ಯತೆ ಮೇರೆಗೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ರವಾಣಿಸಲಾಯಿತು.ಕರ್ನಾಟಕ ರಾಜ್ಯ ರೈತಸಂಘ, ಹಸಿರುಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಜಿಲ್ಲಾಧ್ಯಕ್ಷ ರಾಘವೇಂದ್ರ ನಾಯ್ಕ, ಚೂನಪ್ಪ ಪೂಜೇರ, ಭೀಮಸಿ ಗದಾಡಿ, ಗಣಪತಿ ಇಳಿಗೇರ, ಅಶೋಕ ಯಮಕನಮರಡಿ, ಭರಮು ಖೇಮಲಾಪುರೆ, ರವಿ ಸಿದ್ಧಮ್ಮನವರ, ಗೋಪಾಲ ಕುಕನೂರ, ಮಲ್ಲಿಕಾರ್ಜುನ ರಾಮದುರ್ಗ, ಸತ್ಯಪ್ಪ ಮಲ್ಲಾಪೂರೆ, ಮಹಾಂತೇಷ ಹಿರೇಮಠ, ಜಗದೀಶ್ ದೇವರೆಡ್ಡಿ, ಪರಗೌಡ ಪಾಟೀಲ, ತ್ಯಾಗರಾಜ ಕದಮ, ಕಲ್ಲನಗೌಡ ಪಾಟೀಲ, ಮಲ್ಲಪ್ಪ ಅಂಗಡಿ, ಬಸವರಾಜ ಬಿಜ್ಜೂರ,ಮಹಾದೇವ ಮಡಿವಾಳ, ಮಲ್ಲಯ್ಯ ಚಿಕ್ಕಮಠ, ಜಯಶ್ರೀ ಗುರಣ್ಣವರ ಇತರರು ನೇತೃತ್ವ ವಹಿಸಿದ್ದರು.

ಸಮಿತಿ ರಚನೆ; ಡಾ. ಇಟ್ನಾಳ: ಕಬ್ಬಿನ ಬಾಕಿ ಬಿಲ್ ಕೊಡಿಸುವ ಸಂಬಂಧ ಅಧಿಕಾರಿಗಳ ಸಮಿತಿಯೊಂದನ್ನು ಜಿಲ್ಲಾಡಳಿತ ನೇಮಿಸಿದೆ. ಕಾಲಕಾಲಕ್ಕೆ ರೈತರಿಂದ ಬರುತ್ತಿರುವ ದೂರಿಗೆ ಸ್ಪಂದಿಸಿ ಕಾರ್ಖಾನೆಗಳಿಂದ ಬಿಲ್ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಜಿಲ್ಲಾಡಳಿತ ನಡೆಸಿದೆ. AC, ತಹಶೀಲ್ದಾರ, ಸಹಕಾರಿ ಸಂಘ, ಕೃಷಿ ಜಂಟಿ ನಿರ್ದೇಶಕ, ನಗರದ ಸಕ್ಕರೆ ಸಂಸ್ಥೆಯ ನಿರ್ದೇಶಕರನ್ನೊಳಗೊಂಡ ಐವರ ಸಮಿತಿ ಕಬ್ಬಿನ ಬಾಕಿ ಬಿಲ್ ಕೊಡಿಸುವ ಮೇಲ್ವಿಚಾರಣೆ ನೋಡಿಕೊಳ್ಳುತ್ತದೆ. ರೈತರು ಈ ಸಮಿತಿಗೆ ದೂರು ಸಲ್ಲಿಸಲು ಮನವರಿಕೆ ಮಾಡಿಕೊಡಲಾಗುವುದು ಎಂದರು.

Leave A Reply

 Click this button or press Ctrl+G to toggle between Kannada and English

Your email address will not be published.