ಉತ್ತಮ ಸಮಾಜಕ್ಕಾಗಿ

ಬಡತನ ನಿರ್ಮೂಲನೆ ಕೇಂದ್ರ ಸರಕಾರದ ಮುಖ್ಯ ಗುರಿ – ಸಂಸದ ಅಂಗಡಿ

0

ಬೆಳಗಾವಿ: ದೇಶದ ಪ್ರತಿಯೊಬ್ಬ ನಾಗರಿಕನಿಗೆ ಒಂದು ಭರವಸೆಯ ಉದ್ಯೋಗ ಒದಗಿಸಿ ಅವರನ್ನು ಸ್ವಾವಲಂಬಿ ಮಾಡುವ ಮಹತ್ವಾಕಾಂಕ್ಷಿಯ ಕನಸು ಪ್ರಧಾನಿ ನರೇಂದ್ರ ಮೋದಿ ಅವರು ಹೊಂದಿದ್ದು, ಎಲ್ಲರಿಗೂ ಸ್ವಉದ್ಯೋಗ ನೀಡುವ ಮೂಲಕ ಬಡತನ ನಿರ್ಮೂಲನೆ ಮಾಡುವುದು ಕೇಂದ್ರ ಸರಕಾರದ ಮುಖ್ಯ ಗುರಿಯಾಗಿದೆ ಎಂದು ಸಂಸದ ಸುರೇಶ ಅಂಗಡಿ ಅವರು ಇಂದಿಲ್ಲಿ ಹೇಳಿದರು.

ಬೆಳಗಾವಿಯ ದರಬಾರ ಗಲ್ಲಿಯಲ್ಲಿ ರೂಮನ್ ಟೆಕ್ನಾಲಾಜಿ ಇವರ ಆಶ್ರಯದಲ್ಲಿ ಪ್ರಾರಂಭಿಸಲಾದ ಪ್ರಧಾನ ಮಂತ್ರಿ ಕೌಶಲ್ಯ ತರಬೇತಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು,ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿನ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಅವುಗಳನ್ನು ಕೌಶಲ್ಯ ಅಭಿವೃದ್ದಿ ಒಂದು ವಿಶೇಷ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದಡಿ ನಮ್ಮ ದೇಶದ ಯುವ ಜನತೆ ತರಬೇತಿ ಪಡೆದು ಸ್ವಯಂ ಉದ್ಯೋಗ ಪ್ರಾರಂಭಿಸಬೇಕೆಂಬ ಉದ್ದೇಶ ಅವರದ್ದಾಗಿದೆ ಎಂದು ಅವರು ತಿಳಿಸಿದರು.
ಇಂದು ಇಡಿ ವಿಶ್ವ ಭಾರತವನ್ನು ಗೌರವದಿಂದ ಕಾಣುತ್ತಿದೆ. ದೇಶದಲ್ಲಿ ಶೇ 65 ರಷ್ಟು ಯುವ ಜನರಿದ್ದು,ಇವರೆಲ್ಲರೂ ಸ್ವಯಂ ಉದ್ಯೋಗ ಆರಂಭಿಸಿದರೆ ದೇಶದಲ್ಲಿ ಬಹುದೊಡ್ಡ ಉದ್ಯೋಗ ಕ್ರಾಂತಿಯಾಗಲಿದೆ. ಇದರಿಂ ದೇಶ ವಿಶ್ವದ ಮುಂಚೂಣಿಯಲ್ಲಿ ನಿಲ್ಲಲು ಸಾಧ್ಯವಾಗಿಲಿದೆ ಎಂದು ಹೇಳಿದ ಅವರು, ಪ್ರಧಾನಿ ಮೋದಿ ಅವರು ಜಾತಿ, ಭಾಷೆಯನ್ನು ಮೀರಿ ಯೋಜನೆಗಳನ್ನು ರೂಪಿಸಿದ್ದಾರೆ. ಯುವಜನರು ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಕರೆ ನೀಡಿದರು.
ಕಳೆದ 70 ವರ್ಷಗಳಿಂದ ರಾಜಕೀಯ ಪಕ್ಷಗಳು ಮುಸ್ಲಿಂ ಸಮಾಜವನ್ನು ಉಪಯೋಗಿಸಿಕೊಂಡು ಅಧಿಕಾರವನ್ನು ಅನುಭವಿಸಿವೆ. ಆದರೆ ಈ ಸಮಾಜದ ಅಭಿವೃದ್ದಿ ಮಾತ್ರ ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ ಈ ಸಮಾಜದ ಯುವಕರು ರಾಜಕೀಯ ಪಕ್ಷದ ಆಮಿಷಗಳಿಗೆ ಬಲಿಯಾಗದೆ ಉನ್ನತ ಶಿಕ್ಷಣ ಪಡೆದು ಉದ್ಯೋಗವಂತರಾಗಿ ದೇಶದ ಅಭಿವೃದ್ದಿಯಲ್ಲಿ ಕೈಜೋಡಿಸಬೇಕೆಂದು ಹೇಳಿದ ಅವರು, ನಮಗೆ ಅಮೆರಿಕಾದಲ್ಲಿ ಉದ್ಯೋಗ ಮಾಡುವವರು ಬೇಡ. ನಮ್ಮ ಊರಲ್ಲಿ ಉದ್ಯೋಗ ಮಾಡುವವರು ಬೇಕಾಗಿದ್ದಾರೆ. ಇಲ್ಲಿಯೇ ಕಲಿತು ಇಲ್ಲಿಯೇ ಉದ್ಯೋಗ ಪ್ರಾರಂಭಿಸಿ. ಉದ್ಯೋಗ ಪ್ರಾರಂಭಕ್ಕೆ ಎಲ್ಲ ಪೂರಕ ಸಹಾಯ ಮಾಡಲು ತಾವು ಸದಾ ಸಿದ್ದ ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ತರಬೇತಿ ಕೇಂದ್ರದ ಮುಖ್ಯಸ್ಥ ಆಸಿಫ್ ಸಯ್ಯದ ಅವರು,ಬೆಳಗಾವಿಯ ತರಬೇತಿ ಕೇಂದ್ರದಲ್ಲಿ ಸಧ್ಯಕ್ಕೆ ಬ್ಯಾಂಕಿಂಗ್ ಮತ್ತು ಹಣಕಾಸು, ತಂತ್ರಾಂಶ ಅಭಿವೃದ್ಧಿ, ಕಂಪ್ಯೂಟರ್ ಯಂತ್ರಾಂಶ, ಕಂಪ್ಯೂಟರ್ ನೆಟ್ವರ್ಕಿಂಗ್ ಮತ್ತು ಶೇಖರಣಾ, ಎಲೆಕ್ಟ್ರಿಷಿಯನ್, ಮೊಬೈಲ್ ರಿಪೇರಿ ತಂತ್ರಜ್ಞ, ಸಿ.ಸಿ.ಟಿ.ವಿ. ದುರಸ್ತಿ ತಂತ್ರಜ್ಞ, ಹೊಲಿಗೆ ಮೆಷಿನ್ ಆಪರೇಟರ್ ಮತ್ತು ಫ್ಯಾಶನ್ ಡಿಸೈನಿಂಗ್, ಡ್ರಾಫ್ಟ್ಸ್ಮನ್ ಈ ಎಲ್ಲ ಶಿಕ್ಷಣಗಳು ವಿದ್ಯಾರ್ಥಿಗಳಿಗೆ ಉಚಿತ ವೆಚ್ಚದಲ್ಲಿ ತರಬೇತಿ ನೀಡುವುದರ ಜೊತೆಗೆ ಮತ್ತು ಪ್ರಮಾಣೀಕರಣದ ನಂತರ ಕ್ಯಾಂಪಸ್ ಸಂದರ್ಶನಗಳ ಮೂಲಕ ಉದ್ಯೋಗ ಒದಗಿಸುವ ಕಾರ್ಯ ಈ ಕೇಂದ್ರ ಮಾಡಲಿದೆ.ಇಲ್ಲಿಯವರೆಗೆ 150 ಕ್ಕಿಂತ ಹೆಚ್ಚಿನ ರಾಷ್ಟ್ರೀಯ ಮತ್ತು ಬಹುರಾಷ್ಟ್ರೀಯ ಕಂಪನಿಗಳೊಂದಿಗೆ ಉದ್ಯೊಗ ಅಗತ್ಯಗಳನ್ನು ಪೂರೈಸಲು ರೂಮನ್ ಸಹಯೋಗತ್ವ ಹೊಂದಿದೆ ಎಂದು ಅವರು ವಿವರಿಸಿದರು.

ಸಮಾರಂಭದಲ್ಲಿ ಬಿಜೆಪಿ ಮುಖಂಡ ಮುಖ್ತಾರಪಠಾಣ ಅವರು ಮಾತನಾಡಿದರು. ವೇದಿಕೆ ಮೇಲೆ ಕ್ಯಾಂಟೋನಮೆಂಟ್ ಬೋರ್ಡಿನ ಸದಸ್ಯ ರಿಜ್ವಾನ ಬೇಪಾರಿ, ಫಿರೋಜ ಜಮಾದಾರ, ಸಮಿಯು ಮಲಿಕ, ಅಲ್ತಾಫ ಬಂದಾರ, ಇಮ್ರಾನ ಪಠಾಣ, ಉಬೇದುಲ್ಲಾ ,ಇಕ್ಬಾಲ ಉಪಸ್ಥಿತರಿದ್ದರು. ಶೋಭಾ ಹಾಗೂ ಸಂಗಡಿಗರಿಂದ ಪ್ರಾರ್ಥನೆ ನಡೆಯಿತು. ದಿವ್ಯಾಶ್ರೀ ವಂದಿಸಿದರು. ಹಸನ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.