ಉತ್ತಮ ಸಮಾಜಕ್ಕಾಗಿ

ನಾವು ನುಡಿದಂತೆ ನಡೆದಿದ್ದೇವೆ : ಮುಖ್ಯಮಂತ್ರಿ ಸಿದ್ದರಾಮಯ್ಯ

0

ಬೆಳಗಾವಿ: ಪ್ರಣಾಳಿಕೆಯಲ್ಲಿ ಘೋಷಿಸಿದ ಎಲ್ಲ ಭರವಸೆಗಳನ್ನು ನಮ್ಮ ಸರಕಾರವು ಈಡೇರಿಸಿದ್ದು, ನಾವು ನುಡಿದಂತೆ ನಡೆದಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದರು.
ರಾಯಬಾಗ ತಾಲೂಕಿನ ಕ್ರೀಡಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸರಕಾರದ ಸಾಧನಾ ಸಮಾವೇಶದಲ್ಲಿ ರಾಯಬಾಗ ಹಾಗೂ ಕುಡಚಿ ಮತಕ್ಷೇತ್ರದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾನೆ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯದ ಸಮಗ್ರ ಅಭಿವೃದ್ಧಿಗೆ ನಾವು ಒತ್ತು ನೀಡಿದ್ದು, ಪಕ್ಷಾತೀತವಾಗಿ ಎಲ್ಲ ಮತಕ್ಷೇತ್ರಗಳ ಅಭಿವೃದ್ಧಿಗೆ ಸೌಲಭ್ಯಗಳನ್ನು ಒದಗಿಸಿದ್ದೇವೆ. ರಾಯಬಾಗ ಮತಕ್ಷೇತ್ರದ ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ ರೂ. 185 ಕೋಟಿ ಹಾಗೂ ಕುಡಚಿ ಮತಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗಾಗಿ ರೂ. 133 ಕೋಟಿ ಸೇರಿದಂತೆ ಒಟ್ಟಾರೆಯಾಗಿ ರೂ. 348 ಕೋಟಿ ಅನುದಾನ ನೀಡಲಾಗಿದೆ ಎಂದು ತಿಳಿಸಿದರು.
ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಹಾಗೂ ಸರಕಾರದ ಸಾಧನೆಗಳನ್ನು ಜನರಿಗೆ ತಿಳಿಸಲು ರಾಜ್ಯಾದ್ಯಂತ ಜನೆವರಿ. 13 ರಿಂದ ಪ್ರವಾಸ ಕೈಗೊಂಡು ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡಲಿದ್ದೇನೆ ಎಂದು ಹೇಳಿದರು.
ನೀರಾವರಿ ಸಚಿವ ಎಂ.ಕೆ ಪಾಟೀಲ ಅವರು ಮಾತನಾಡಿ, ರಾಜ್ಯ ಸರಕಾರ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದು ರಾಜ್ಯವನ್ನು ಹಸಿವುಮುಕ್ತವಾಗಿಸಿದಂತೆ, ಕೆರೆಗಳನ್ನು ತುಂಬಿಸುವ ಯೋಜನೆಯನ್ನು ಅನುಷ್ಠಾನಕ್ಕೆ ತಂದು ರಾಜ್ಯವನ್ನು ಬರಮುಕ್ತವಾನ್ನಾಗಿಸಲು ಶ್ರಮಿಸುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ 100ಕ್ಕೂ ಹೆಚ್ಚು ಕೆರೆಗಳಿಗೆ ನದಿಗಳ ಮೂಲಕ ನೀರು ತುಂಬಿಸಲಾಗಿದ್ದು, ಒಟ್ಟಾರೆ ನೀರಾವರಿಗಾಗಿ 45 ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದೆ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸರಕಾರ ರೂ. 26 ಸಾವಿರ ಕೋಟಿ ಅನುದಾನ ನೀಡುವ ಮೂಲಕ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹೆಚ್ಚು ಗಮನ ನೀಡಿದೆ ಎಂದು ಹೇಳಿದರು.
ಕಾಡಾ ಅಧ್ಯಕ್ಷರಾದ ಈರಗೌಡ ಪಾಟೀಲ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬೆಳ್ಳಿ ಖಡ್ಗ ನೀಡಿ ಸನ್ಮಾನಿಸಿದರು. ರಾಯಬಾಗ ನವನಿರ್ಮಾಣದ ಶೀರ್ಷಿಕೆಯಡಿ ಸರಕಾರದ ಸಾಧನೆಯನ್ನು ತಿಳಿಸಿವ ‘ಕಿರು ಹೊತ್ತಿಗೆ’ಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ವೇದಿಕೆಯಲ್ಲಿದ್ದ ಗಣ್ಯರು ಬಿಡುಗಡೆಗೊಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಸಂಸದರಾದ ಪ್ರಕಾಶ ಹುಕ್ಕೇರಿ, ಜಿಲ್ಲಾ ಪಂಚಾಯತ ಮುಖ್ಯಕರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್ ಆರ್. ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸ್ಥಳೀಯ ಶಾಸಕ ದುರ್ಯೋದನ ಐಹೊಳೆ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾವಿರಾರು ಸಾರ್ವಜನಿಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.