ಉತ್ತಮ ಸಮಾಜಕ್ಕಾಗಿ

ರಾಜ್ಯ ಬಿಜೆಪಿ ಅಧ್ಯಕ್ಷರಿಗೆ ಗೋವಾ ಸರ್ಕಾರ ಪತ್ರ-ಸರ್ಕಾರಕ್ಕೆ ಪ್ರತಿಷ್ಠೆ ವಿಷಯವಲ್ಲ ಮಹದಾಯಿ ವಿವಾದ: ಚರ್ಚೆಗೆ ಸರ್ಕಾರ ಸಿದ್ಧ- ಎಂ.ಬಿ.ಪಾಟೀಲ

0

ಬೆಳಗಾವಿ: ರಾಜ್ಯದ ಹಿತದೃಷ್ಟಿಯಿಂದ ಹಾಗೂ ಮಹದಾಯಿ ವಿಷಯವನ್ನು ಬಗೆಹರಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಯಾವುದೇ ಪ್ರತಿಷ್ಠೆಗೆ ಒಳಗಾಗದೇ ಗೋವಾ ರಾಜ್ಯದ ಮುಖ್ಯಮಂತ್ರಿಗಳ ಜತೆ ಚರ್ಚೆಗೆ ಸಿದ್ಧವಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ(ಡಿ.22) ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮಹದಾಯಿ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದ ನಿಲುವು ಕುರಿತು ಲಿಖಿತ ಪತ್ರಿಕೆ ಹೇಳಿಕೆಯನ್ನು ಬಿಡುಗಡೆಗೊಳಿಸಿದರು.

ಮಹದಾಯಿ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದ ರೈತರ ಹಿತ ಕಾಯುವುದಕ್ಕಾಗಿ ಸರ್ಕಾರ ಬದ್ಧವಿದೆ. ಅಗತ್ಯಬಿದ್ದರೆ ಸ್ವತಃ ಮುಖ್ಯಮಂತ್ರಿಗಳೇ ಗೋವಾ ರಾಜ್ಯಕ್ಕೆ ತೆರಳಿ ಮಾತುಕತೆಗೆ ಸಿದ್ಧವಿದ್ದಾರೆ.
ಗೋವಾ ರಾಜ್ಯ ಕರೆದರೆ ಯಾವುದೇ ಸ್ಥಳ ಹಾಗೂ ಯಾವುದೇ ದಿನಾಂಕದಂದು ಚರ್ಚೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿದ್ಧವಾಗಿದ್ದಾರೆ.
ಚುನಾವಣೆ ಸಮೀಪಿಸುತ್ತಿರುವುದರಿಂದ ಯಾವುದೇ ಸಂದರ್ಭದಲ್ಲಿ ನೀತಿ ಸಂಹಿತಿ ಜಾರಿಯಾಗಬಹುದು. ಆದ್ದರಿಂದ ಆದಷ್ಟು ಬೇಗನೇ ಈ ಮಾತುಕತೆ ಮೂಲಕ ಈ ವಿಷಯವನ್ನು ಬಗೆಹರಿಸಬೇಕು ಎಂಬುದು ಸರ್ಕಾರದ ಆಶಯವಾಗಿದೆ. 7.56 ಟಿಎಂಸಿ ಕುಡಿಯುವ ನೀರು ಬಳಕೆಗೆ ಸಂಬಂಧಿಸಿದ ವಿಷಯವನ್ನು ಒಂದೇ ಸಭೆ ಅಥವಾ ಸಮಾಲೋಚನೆಯಲ್ಲಿ ಇತ್ಯರ್ಥಪಡಿಸಬೇಸಬೇಕು ಎಂದು ಮನವಿ ಮಾಡಿಕೊಂಡರು.
ಕೇಂದ್ರ ಸಕಾರವು 2002ರಲ್ಲಿಯೇ ಕರ್ನಾಟಕಕ್ಕೆ 7.56 ಟಿಎಂಸಿ ನೀರು ಬಳಕೆ ಮಾಡಲು ತಾತ್ವಿಕ ತೀರುವಳಿ ನೀಡಿರುವುದರಿಂದ ಸದರಿ ಪ್ರಮಾಣದ ನೀರನ್ನು ತುರ್ತಾಗಿ ಬಳಸಿಕೊಳ್ಳಲು ಅನುವು ಮಾಡಿಕೊಟ್ಟರೆ ಮುಂಬರುವ ದಿನಗಳಲ್ಲಿ ಬರಪೀಡಿತ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂಬುದು ರಾಜ್ಯದ ನಿಲುವು ಆಗಿದೆ ಎಂದು ಸಚಿವ ಎಂ.ಬಿ.ಪಾಟೀಲ ಸ್ಪಷ್ಟಪಡಿಸಿದರು.

ಶಿಷ್ಟಾಚಾರ ಪಾಲನೆ ಸಮಂಜಸ:
ಮಹದಾಯಿ- ಕಳಸಾ ಬಂಡೂರಿ ಯೋಜನೆಗೆ ಸಂಬಂಧಿಸಿದಂತೆ ಗೋವಾ ರಾಜ್ಯದ ಮುಖ್ಯಮಂತ್ರಿಗಳು ಶಿಷ್ಟಾಚಾರದ ಪ್ರಕಾರ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವುದು ಸಮಂಜಸವಾಗಿತ್ತು ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಅಭಿಪ್ರಾಯಪಟ್ಟರು.
ಮಹದಾಯಿ ವಿವಾದವನ್ನು ಪರಸ್ಪರ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ರಾಜ್ಯ ಸರ್ಕಾರವು ಈಗಾಗಲೇ ಹಲವಾರು ಬಾರಿ ಗೋವಾ ರಾಜ್ಯದ ಜತೆಗೆ ಅಧಿಕೃತವಾಗಿ ಪತ್ರಮುಖೇನ ಕೋರಲಾಗಿತ್ತು.
ರಾಜ್ಯ ಸರ್ಕಾರದ ಅಧಿಕೃತ ಪತ್ರಗಳಿಗೆ ಯಾವುದೇ ಉತ್ತರ ನೀಡದ ಗೋವಾ ಸರ್ಕಾರ ರಾಜ್ಯ ಬಿಜೆಪಿಯ ಅಧ್ಯಕ್ಷರಿಗೆ ಪತ್ರ ಬರೆದಿರುವುದು ಅಷ್ಟೊಂದು ಸಮಂಜಸವಲ್ಲ; ಆದಾಗ್ಯ ಈ ವಿಷಯವನ್ನು ಸರ್ಕಾರ ಪ್ರತಿಷ್ಠೆಯಾಗ ಸ್ವೀಕರಿಸದೇ ರೈತರ ಹಿತದೃಷ್ಟಿಯಿಂದ ಗೋವಾ ಸರ್ಕಾರದ ಜತೆ ಚರ್ಚೆಗೆ ಮುಕ್ತ ಮನಸ್ಸು ಹೊಂದಿದ್ದು, ಅವರು ಈಗಲೇ ಸಭೆ ಕರೆದರೂ ಚರ್ಚೆಗೆ ಮುಖ್ಯಮಂತ್ರಿಗಳು ಸಿದ್ಧವಿದ್ದಾರೆ ಎಂದು ಪಾಟೀಲ ಹೇಳಿದರು.
ಟ್ರಿಬ್ಯುನಲ್ ಸಲಹೆ ಪ್ರಕಾರ ಸದ್ಯಕ್ಕೆ 7.56 ಟಿಎಂಸಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಮಾತ್ರ ಮಾತುಕತೆ ಮೂಲಕ ಬಗೆಹರಿಸಿಕೊಂಡು ಇನ್ನುಳಿದ ಸುಮಾರು 29 ಟಿಎಂಸಿ ನೀರು ಹಂಚಿಕೆ ವಿವಾದವನ್ನು ಟ್ರಿಬ್ಯುನಲ್‍ನಲ್ಲೇ ಬಗೆಹರಿಸಿಕೊಳ್ಳಬಹುದು ಎಂದು ಸಚಿವ ಪಾಟೀಲ ಹೇಳಿದರು.

Leave A Reply

 Click this button or press Ctrl+G to toggle between Kannada and English

Your email address will not be published.