ಉತ್ತಮ ಸಮಾಜಕ್ಕಾಗಿ

ಕಿತ್ತೂರು ಸೈನಿಕ ಶಾಲೆ ದೇಶಕ್ಕೆ ಮಾದರಿ: ವಿಜಯ ಸಂಕೇಶ್ವರ

0

ಬೆಳಗಾವಿ: ಕಿತ್ತೂರಿನ ಸೈನಿಕ ಶಾಲೆ ಇಡೀ ದೇಶಕ್ಕೆ ಮಾದರಿಯಾಗಿದೆ. ದೇಶದಲ್ಲಿ ಇಂತಹ ನೂರಾರು ಸೈನಿಕ ಶಾಲೆಗಳು ನಿರ್ಮಾಣವಾಗಲಿ ಎಂದು ಉದ್ಯಮಿ ವಿಜಯ ಸಂಕೇಶ್ವರ ಅವರು ಹೇಳಿದರು.
ಚನ್ನಮ್ಮನ ಕಿತ್ತೂರಿನ ಸಮೀಪದ ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ವಸತಿ ಸೈನಿಕ ಶಾಲೆಯ ಬಿ.ಡಿ. ಜತ್ತಿ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಶಾಲೆಯ 49ನೇ ವಾರ್ಷಿಕ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಕಿತ್ತೂರಿನ ಸೈನಿಕ ಶಾಲೆಯಲ್ಲಿ ಕಲಿತ ಎಲ್ಲ ವಿದ್ಯಾರ್ಥಿನಿಯರು ಇಂದು ಸ್ವಾವಲಂಬಿಗಳಾಗಿ, ವಿವಿಧ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿನಿಯರು ಶಿಸ್ತು ಹಾಗೂ ಸಂಯಮವನ್ನು ಮೈಗೂಡಿಸಿಕೊಳ್ಳುತ್ತಾರೆ ಎಂದು ಅವರು ಹೇಳಿದರು.
ದೇಶದಲ್ಲಿ ಹೆಣ್ಣುಮಕ್ಕಳ ಪರಿಸ್ಥಿತಿ ಇಂದಿಗೂ ಗಂಭೀರವಾಗಿದ್ದು, ಅವರು ಹುಟ್ಟಿನಿಂದ ಕೊನೆಯವರೆಗೂ ಪುರುಷರ ಆಶ್ರಯದಲ್ಲೇ ಬದುಕುವಂತಾಗಿದೆ. ಆದ್ದರಿಂದ ಹೆಣ್ಣುಮಕ್ಕಳಿಗೆ ಶಿಕ್ಷಣ ಅತ್ಯವಶ್ಯವಾಗಿದೆ. ಕುಟುಂಬದ ಹೆಣ್ಣುಮಕ್ಕಳು ಶಿಕ್ಷಣವಂತರಾಗಿದ್ದರೆ ಆ ಕುಟುಂಬ ಉತ್ತಮವಾಗಿರಲು ಸಾಧ್ಯವಿದೆ ಎಂದರು.
ಇಂದು ಕುಟುಂಬಗಳಲ್ಲಿ ಅನ್ಯೋನ್ಯತೆ ಮಾಯವಾಗಿದೆ. ಒಗ್ಗಟ್ಟು ಕಂಡುಬರುತ್ತಿಲ್ಲ ಎಂದು ಅವರು ವಿಷಾದಿಸಿದರು. ಒಗ್ಗಟ್ಟು ಹಾಗೂ ಗುಂಪುಕಾರ್ಯವನ್ನು ಸೈನಿಕ ಶಾಲೆಯಲ್ಲಿ ವಿದ್ಯಾರ್ಥಿನಿಯರು ಸದಾ ಕಲಿಯುತ್ತಾರೆ ಎಂದು ತಿಳಿಸಿದರು.
ಕಿತ್ತೂರು ಚನ್ಮಮ್ಮನ ಧೈರ್ಯ ಹಾಗೂ ಸಾಹಸಗಳನ್ನು ಎಲ್ಲ ಮಹಿಳೆಯರು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಾಲೆಯ ಆಡಳಿತ ಮಂಡಳಿ ಈ ಶಾಲೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಆಹ್ವಾನಿಸಿ, ಶಾಲೆಯಲ್ಲಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಬೇಕು. ಹೆಣ್ಣುಮಕ್ಕಳ ಸಬಲೀಕರಣ ಹಾಗೂ ಹಿತದೃಷ್ಠಿಯಿಂದ ಕೇಂದ್ರಸರ್ಕಾರ ದೇಶಾದ್ಯಂತ ಇಂತಹ ನೂರಾರು ಸೈನಿಕ ಶಾಲೆಗಳನ್ನು ಪ್ರಾರಂಭಿಸಬೇಕೆಂದು ಅವರು ಹೇಳಿದರು.
ಕಿತ್ತೂರು ರಾಣಿ ಚನ್ನಮ್ಮ ಸ್ಮಾರಕ ಸಮಿತಿಯ ಡಾ. ದ್ರಾಕ್ಷಾಯಣಿ ಜಂಗಮಶೆಟ್ಟಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸೈನಿಕ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿನಿಯರಿಗೆ ಎಲ್ಲ ಕಲೆ, ನೈಪುಣ್ಯತೆಗಳ ಬಗ್ಗೆ ಅಗತ್ಯ ತರಬೇತಿ ನೀಡಲಾಗುತ್ತಿದ್ದು, ಇಲ್ಲಿನ ವಿದ್ಯಾರ್ಥಿನಿಯರು ರಾಜ್ಯ ಹಾಗೂ ರಾಷ್ಟ್ರಮಟ್ಟದ ಅನೇಕ ಸಾಂಸ್ಕøತಿಕ ಸ್ಪರ್ಧೆ ಹಾಗೂ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ಗಳಿಸಿದ್ದಾರೆ ಎಂದು ತಿಳಿಸಿದರು.

ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದ ಶಾಲೆಯ ವಿದ್ಯಾರ್ಥಿನಿಯರಿಗೆ ಹಾಗೂ ಶಾಲೆಯ ಸಾಂಸ್ಕøತಿಕ ಸ್ಪರ್ಧೆ ಹಾಗೂ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಿ, ಸನ್ಮಾನಿಸಲಾಯಿತು.
ಶ್ರೀಮತಿ ಲಲಿತಾ ವಿಜಯ ಸಂಕೇಶ್ವರ, ಕಿತ್ತೂರು ರಾಣಿ ಚನ್ನಮ್ಮ ಸ್ಮಾರಕ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯರಾದ ಮಹಾಂತೇಶ ಕೌಜಲಗಿ, ಶಾಲೆಯ ಪ್ರಭಾರ ಪ್ರಾಚಾರ್ಯರಾದ ಶ್ರೀಮತಿ ಕಮಲಾ ನಾಯಕ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಿತ್ತೂರು ರಾಣಿ ಚನ್ನಮ್ಮ ಸ್ಮಾರಕ ಸಮಿತಿಯ ಚೇರಮನ್‍ರಾದ ಡಾ. ಮಹೇಂದ್ರ.ಎಸ್. ಕಂಠಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆಡೆಟ್ ಅನನ್ಯಾ ಗುತ್ತೇದಾರ ವಂದಿಸಿದರು. ಶಾಲೆಯ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿನಿಯರು, ಪಾಲಕರು ಸೇರಿದಂತೆ ಸಾವಿರಾರು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪಥಸಂಚಲನ-ಸಾಹಸ ಪ್ರದರ್ಶನ:
ಕಾರ್ಯಕ್ರಮಕ್ಕೂ ಮುಂಚೆ ಶಾಲೆಯ ವಿದ್ಯಾರ್ಥಿನಿಯರ ತಂಡಗಳಿಂದ ಪಥಸಂಚಲನ ಜರುಗಿತು. ವಿದ್ಯಾರ್ಥಿನಿಯರು ಆಕರ್ಷಕವಾಗಿ ಪಥಸಂಚಲನ ನಡೆಸಿದರು. ಉದ್ಯಮಿ ವಿಜಯ ಸಂಕೇಶ್ವರ ಪಥಸಂಚಲನದ ಪರಿವೀಕ್ಷಣೆ ಮಾಡಿದರು.
ನಂತರ ವಿದ್ಯಾರ್ಥಿನಿಯರು ಕುದುರೆ ಓಟ, ಯೋಗಾಸನ, ಕರಾಟೆ ಸೇರಿದಂತೆ ವಿವಿಧ ಸಾಹಸಗಳನ್ನು ಪ್ರದರ್ಶಿಸಿ, ನೆರೆದಿದ್ದವರನ್ನು ರೋಮಾಂಚನಗೊಳಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.