ಉತ್ತಮ ಸಮಾಜಕ್ಕಾಗಿ

ಶಾಂತಿ ಕದಡುವವರ ಮೇಲೆ ಕಟ್ಟುನಿಟ್ಟಿನ ಕ್ರಮ: ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ

0

ಬೆಳಗಾವಿ: ನಗರದಲ್ಲಿ ಶಾಂತಿ ಕದಡುತ್ತಿರುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ ಜಾರಕಿಹೊಳಿ ಅವರು ತಿಳಿಸಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರೀತಿ ಗಲಭೆಗಳು ನಡೆಯುವುದರಿಂದ ಇಡೀ ನಗರದ ಶಾಂತಿ ಹಾಗೂ ಸುವ್ಯವಸ್ಥೆಗೆ ದಕ್ಕೆ ಬರುತ್ತದೆ. ಆದ್ದರಿಂದ ಗಲಭೆಗಳಲ್ಲಿ ಭಾಗವಹಿಸುವವರ ವಿರುದ್ಧ ಯಾವುದೇ ಮುಲಾಜಿಲ್ಲದೇ ಪೊಲೀಸ್ ಅಧಿಕಾರಿಗಳು ಶಿಸ್ತು ಕ್ರಮ ಜರುಗಿಸುವಂತೆ ಆದೇಶಿಸಿದ್ದೇನೆ ಎಂದು ಹೇಳಿದರು.
ಆರೋಪಿಗಳ ಬಂಧನ ಹಾಗೂ ರಕ್ಷಣೆಯಲ್ಲಿ ಯಾವುದೇ ರಾಜಕೀಯ ಒತ್ತಡವೂ ಇಲ್ಲ. ರಾಜಕೀಯ ಒತ್ತಡಗಳಿಗೆ ಒಳಗಾಗದೇ ತಮ್ಮ ಕರ್ತವ್ಯವನ್ನು ನಿರ್ವಹಿಸುವಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಗಲಭೆ ನಡೆಯುತ್ತಿರುವ ಎಲ್ಲ ಪ್ರದೇಶಗಳಲ್ಲಿ ಇತ್ತೀಚೆಗೆ ಸಿ.ಸಿ ಟಿವಿ ಹಾಗೂ ಹೈಮಾಸ್ಕ್ ವಿದ್ಯುತ್‍ದೀಪಗಳನ್ನು ಅಳವಡಿಸಲಾಗಿದೆ. ಗಲಭೆಗಳ ನಿಯಂತ್ರಣ ಹಾಗೂ ನಗರದ ಸುವ್ಯವಸ್ಥೆಗಾಗಿ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ನಗರದ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರು ಸಹ ಅಗತ್ಯ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.
ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ಪಿರೋಜ್ ಸೇಠ, ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ, ಡಿಸಿಪಿ ಸೀಮಾ ಲಾಟ್ಕರ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.