ಉತ್ತಮ ಸಮಾಜಕ್ಕಾಗಿ

ಸಂಗೊಳ್ಳಿ ರಾಯಣ್ಣ ಉತ್ಸವ ಜನವರಿ 12-13ರಂದು

0

ಬೆಳಗಾವಿ: ಬ್ರಿಟಿಷ್‍ರ ವಿರುದ್ಧ ಕೆಚ್ಚೆದೆಯ ಹೋರಾಟ ಮಾಡಿದ ಸಂಗೊಳ್ಳಿ ರಾಯಣ್ಣನ ಹುಟ್ಟೂರಾದ ಸಂಗೊಳ್ಳಿಯಲ್ಲಿ ಪ್ರತಿವರ್ಷದಂತೆ ಜನವರಿ 12 ಹಾಗೂ 13ರಂದು ಸಂಗೊಳ್ಳಿ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ ತಿಳಿಸಿದ್ದಾರೆ. ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದ ಸಂಗೊಳ್ಳಿ ಉತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಗೊಳ್ಳಿ ಉತ್ಸವ ಬರೀ ಸರ್ಕಾರದ ಕಾರ್ಯಕ್ರಮವಾಗಬಾರದು ಗ್ರಾಮದ ಪ್ರತಿಯೊಬ್ಬರು ಸ್ವಯಂಪ್ರೇರಣೆಯಿಂದ ಇದರಲ್ಲಿ ಭಾಗವಹಿಸುವ ಮೂಲಕ ಉತ್ಸವವನ್ನು ಯಶಸ್ವಿಗೊಳಿಸಬೇಕು. ಸಂಗೊಳ್ಳಿ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಲಿದ್ದು, ಎಲ್ಲ ಗ್ರಾಮಸ್ಥರು ಇದರಲ್ಲಿ ಭಾಗವಹಿಸುವ ಮೂಲಕ ಎರಡು ದಿನಗಳ ಕಾಲ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಿಸಬೇಕು ಎಂದರು. ವೇದಿಕೆ ನಿರ್ಮಾಣ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲಾತಂಡಗಳ ಆಯ್ಕೆ, ಕ್ರೀಡಾಕೂಟ, ಊಟ, ವಸತಿ ವ್ಯವಸ್ಥೆ, ಕುಡಿಯುವ ನೀರು ಹಾಗೂ ಸ್ವಚ್ಛತೆಗೆ ಸಂಬಂಧಿಸಿದಂತೆ ಉತ್ಸವ ಸಮಿತಿಗಳು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಸಭೆಯಲ್ಲಿ ಗ್ರಾಮಸ್ಥರು ನೀಡಿರುವ ಸಲಹೆ-ಸೂಚನೆಗಳನ್ನು ಆಧರಿಸಿ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿಯಾವುಲ್ಲಾ ಭರವಸೆ ನೀಡಿದರು.

ಯುವ ಸಮಾವೇಶಕ್ಕೆ ಸಲಹೆ: ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ಡಾ.ವಿ.ಐ.ಪಾಟೀಲ ಅವರು ಮಾತನಾಡಿ, ಸಂಗೊಳ್ಳಿ ರಾಯಣ್ಣನ ಅಪ್ರತಿಮ ಹೋರಾಟವನ್ನು ಯುವಜನತೆಗೆ ಪರಿಚಯಿಸಲು ಈ ಬಾರಿ ಯುವ ಸಮಾವೇಶವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಸಂಗೊಳ್ಳಿ ಉತ್ಸವ ಸಂದರ್ಭದಲ್ಲಿ ಸ್ವಚ್ಛತೆ ಕಾಪಾಡಲು ಆದ್ಯತೆ ನೀಡಬೇಕು; ಸ್ವಚ್ಛತೆ ಎಂಬುದು ಕೇವಲ ಉತ್ಸವಕ್ಕೆ ಸೀಮಿತಗೊಳ್ಳದೇ ಅದು ಎಲ್ಲರ ಸ್ವಭಾವ ಆಗಬೇಕು ಅಂದಾಗ ಮಾತ್ರ ಸ್ವಚ್ಛತೆ ಸಾಧ್ಯವಾಗಲಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್ ಆರ್. ಅವರು ಸಲಹೆ ನೀಡಿದರು. ಇತಿಹಾಸ ಪ್ರಸಿದ್ಧವಾಗಿರುವ ಸಂಗೊಳ್ಳಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಪರಿವರ್ತಿಸಲು ಎಲ್ಲರು ಕೈಜೋಡಿಸಬೇಕು ಎಂದು ಮನವಿ ಮಾಡಿಕೊಂಡರು.

ಜನವರಿ 6ರಿಂದ ವೀರಜ್ಯೋತಿ ಯಾತ್ರೆ: ಸಂಗೊಳ್ಳಿ ಉತ್ಸವದ ಅಂಗವಾಗಿ ವೀರಜ್ಯೋತಿ ಯಾತ್ರೆಯು ಖಾನಾಪುರ ತಾಲ್ಲೂಕು ನಂದಗಡದಿಂದ ಜನವರಿ 6ರಿಂದ ಸಂಚಾರ ಆರಂಭಿಸಲಿದ್ದು, ಜಿಲ್ಲೆಯ ವಿವಿಧೆಡೆ ಸಂಚರಿಸಿ ಜನವರಿ 12ರಂದು ಬೆಳಿಗ್ಗೆ ಸಂಗೊಳ್ಳಿ ತಲುಪಲಿದೆ ಎಂದು ಬೈಲಹೊಂಗಲ ಉಪವಿಭಾಗಾಧಿಕಾರಿ ವಿಜಯಕುಮಾರ ಹೊನಕೇರಿ ವಿವರಿಸಿದರು. ಸ್ಥಳೀಯ ಜನರು ಹಾಗೂ ಅಧಿಕಾರಿಗಳನ್ನು ಒಳಗೊಂಡಂತೆ ಪ್ರಚಾರ, ಸ್ವಾಗತ, ಊಟ, ವಸತಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಿತಿಗಳನ್ನು ರಚಿಸಲಾಗುವುದು ಎಂದರು. ಕಬಡ್ಡಿ, ಮಲ್ಲಕಂಬ, ಕುಸ್ತಿ ಕ್ರೀಡೆಗಳಿಗೆ ಹೆಚ್ಚಿನ ಪ್ರಚಾರ ನೀಡಬೇಕು ಹಾಗೂ ಬಹುಮಾನ ಮೊತ್ತವನ್ನು ಹೆಚ್ಚಿಸುವ ಮೂಲಕ ರಾಜ್ಯಮಟ್ಟದ ಸ್ಪರ್ಧೆಗಳನ್ನು ಆಯೋಜಿಸಬೇಕು, ಉತ್ಸವದ ಎರಡೂ ದಿನ ಊಟದ ವ್ಯವಸ್ಥೆ ಮಾಡಬೇಕು, ಹಿರಿಯ ಸಾಹಿತಿಗಳನ್ನು ಆಹ್ವಾನಿಸಿ ವಿಚಾರಗೋಷ್ಠಿ ಏರ್ಪಡಿಸಬೇಕು, ಸಂಗೊಳ್ಳಿ ರಾಯಣ್ಣ ಪ್ರಶಸ್ತಿಯನ್ನು ಉತ್ಸವದಲ್ಲಿ ನೀಡುವ ಪರಿಪಾಠವನ್ನು ಆರಂಭಿಸಬೇಕು ಎಂಬುದು ಸೇರಿದಂತೆ ಅನೇಕ ಸಲಹೆ-ಸೂಚನೆಗಳನ್ನು ಗ್ರಾಮಸ್ಥರು ನೀಡಿದರು. ಸರ್ಕಾರದಿಂದ ಲಭ್ಯವಿರುವ ಅನುದಾನದಲ್ಲಿ ಉತ್ಸವವನ್ನು ಯಶಸ್ವಿಯಾಗಿ ನಡೆಸಲು ಕ್ರಮಕೈಗೊಳ್ಳಲಾಗುವುದು. ಊಟೋಪಚಾರ ಸೇರಿದಂತೆ ಕೆಲವೊಂದು ಸಣ್ಣಪುಟ್ಟ ಖರ್ಚುಗಳನ್ನು ಭರಿಸಲು ಪ್ರಾಯೋಜಕತ್ವ ನೀಡಬೇಕು ಎಂದು ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಆರ್. ರವಿಕಾಂತೇಗೌಡ, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಶೈಲಾ ಸಿದ್ರಾಮನಿ, ಜಿಲ್ಲಾ ಪಂಚಾಯತಿ ಸದಸ್ಯ ಅನಿಲ ಮೇಕಲಮರಡಿ, ಗ್ರಾಮ ಪಂಚಾಯತಿ ಅಧ್ಯಕ್ಷೆ ಯಲ್ಲವ್ವ ಹಳೆಮನಿ, ಉಪಾಧ್ಯಕ್ಷ ಬಸವರಾಜ ಕೊಡ್ಲಿ ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.