ಉತ್ತಮ ಸಮಾಜಕ್ಕಾಗಿ

ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಗ್ರಾಹಕರು ಕಾನೂನಿನ ನೆರವು ಪಡೆಯಲಿ: ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ

0

ಬೆಳಗಾವಿ: ಗ್ರಾಹಕರು ತಾವು ಖರೀದಿಸುವ ವಸ್ತುಗಳು ಅಥವಾ ಪಡೆಯುವ ಸೇವೆಯಲ್ಲಿ ಗುಣಮಟ್ಟ ಇಲ್ಲದಿದ್ದರೇ ಕಾನೂನಿನ ನೆರವು ಪಡೆದು, ನ್ಯಾಯ ದೊರಕಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಅವರು ಹೇಳಿದರು.
ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಮತ್ತು ಇನ್ನಿತರ ಇಲಾಖೆಗಳ ಆಶ್ರಯದಲ್ಲಿ ಬುಧವಾರ (ಡಿ.27) ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
1986ರಲ್ಲಿಯೇ ಗ್ರಾಹಕರ ಹಕ್ಕುಗಳ ಕಾಯ್ದೆ ಜಾರಿಗೆ ಬಂದರೂ ಇದರ ಬಗ್ಗೆ ಇಂದಿಗೂ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಇಲ್ಲ. ಬದಲಾದ ಇಂದಿನ ಸನ್ನಿವೇಶದಲ್ಲಿ ಈ ಬಗ್ಗೆ ಹೆಚ್ಚಿನ ಪ್ರಚಾರದ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಗ್ರಾಹಕರ ಹಕ್ಕುಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಗ್ರಾಹಕರ ಹಕ್ಕುಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ 74 ಗುಂಪುಗಳನ್ನು ರಚಿಸಲಾಗಿದ್ದು, ಅವುಗಳ ಮೂಲಕ ವಿವಿಧ ರೀತಿಯಲ್ಲಿ ಪ್ರಚಾರ ನಡೆಸಲಾಗುತ್ತಿದೆ. ಮುಖ್ಯವಾಗಿ ಮಕ್ಕಳಿಗೆ ಈ ಬಗ್ಗೆ ತಿಳಿಸಿಕೊಡುವುದು ಉತ್ತಮ. ಏಕೆಂದರೆ ಅವರು ತಾವು ತಿಳಿದುಕೊಂಡ ವಿಷಯಗಳ ಬಗ್ಗೆ ತಮ್ಮ ಪಾಲಕರು ಹಾಗೂ ಸ್ನೇಹಿತರ ಬಳಿ ಹೇಳಿಕೊಳ್ಳುತ್ತಾರೆ ಎಂದು ಅವರು ಹೇಳಿದರು.
ನಾಗರಿಕತೆ ಬೆಳೆದಂತೆ ಮನುಷ್ಯನಲ್ಲಿ ದುರಾಸೆ ಹೆಚ್ಚಾಗುತ್ತಿದ್ದು, ಇದರಿಂದ ಮೋಸ ಮಾಡುವ ಪ್ರವೃತ್ತಿ ಬೆಳೆಯುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಹಕರ ಹಕ್ಕುಗಳ ಕಾಯ್ದೆ ಅತ್ಯಂತ ಉಪಯುಕ್ತವಾಗಿದೆ ಎಂದು ತಿಳಿಸಿದರು.
ಆರ್. ಎಲ್. ಕಾನೂನು ಮಹಾವಿದ್ಯಾಲಯದ ನಿವೃತ್ತ ಶಿಕ್ಷಕರಾದ ವಿ.ಎನ್. ಜೋಶಿ ಅವರು ಉಪನ್ಯಾಸ ನೀಡಿ, ಆಧುನಿಕ ತಂತ್ರಜ್ಞಾನವು ಬೆಳೆದಂತೆ ಗ್ರಾಹಕರು ಮೋಸ ಹೋಗುತ್ತಿದ್ದಾರೆ. ಮೋಸ ಹೋಗುವವರಿಗಿಂತ ಮೋಸ ಮಾಡುವವರು ತುಂಬಾ ಬುದ್ಧಿವಂತರಾಗಿರುತ್ತಾರೆ. ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ಪ್ರತಿಯೊಬ್ಬರು ಶಿಕ್ಷಣವಂತಾರಗಬೇಕು ಎಂದು ಹೇಳಿದರು.
ಕೇವಲ ಕಾನೂನುನಿಂದ ಮಾತ್ರ ಸಮಾಜವನ್ನು ಸುಧಾರಿಸಲು ಸಾಧ್ಯವಿಲ್ಲ. ಜೊತೆಗೆ ಸಾರ್ವಜನಿಕರ ಪರಿಶ್ರಮದ ಅವಶ್ಯಕತೆ ಇದೆ. ಗ್ರಾಹಕರು ಯಾವುದೇ ವಸ್ತುಗಳನ್ನು ಖರೀದಿಸುವ ಮುಂಚಿತವಾಗಿ ಅದರ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಳ್ಳವುದು ಉತ್ತಮ ಎಂದು ಸಲಹೆ ನೀಡಿದರು.
ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯ ಹೆಚ್ಚುವರಿ ಅಧ್ಯಕ್ಷರಾದ ಎ.ಜಿ. ಮಾಲ್ದಾರ ಅವರು ಮಾತನಾಡಿ, ಗ್ರಾಹಕರು ತಮ್ಮ ಹಕ್ಕುಗಳ ಬಗ್ಗೆ ಅರಿತುಕೊಳ್ಳುವುದು ಅವಶ್ಯವಾಗಿದೆ. ಇದರಿಂದ ಮೋಸ ಹೋದ ಸಂದರ್ಭದಲ್ಲಿ ಒಂದು ಕಂಪನಿ ಅಥವಾ ವ್ಯಕ್ತಿಯ ವಿರುದ್ಧ ನ್ಯಾಯಾಲಯದಲ್ಲಿ ಧಾವೆ ಹೂಡಲು ಸರಳವಾಗುತ್ತದೆ ಎಂದು ಹೇಳಿದರು.
ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರಾದ ಶ್ರೀಮತಿ ಸೈಯದಾಆಪ್ರೀನ್‍ಬಾನು ಎಸ್. ಬಳ್ಳಾರಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಗ್ರಾಹಕರು ತಮ್ಮ ಹಕ್ಕುಗಳ ಬಗ್ಗೆ ಅವಶ್ಯವಾಗಿ ತಿಳಿದುಕೊಳ್ಳಬೇಕಾಗಿದೆ. ಆ ನಿಟ್ಟಿನಲ್ಲಿ ನಮ್ಮ ಇಲಾಖೆಯಿಂದ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಬಹುಮಾನ ವಿತರಣೆ:
ರಾಷ್ಟ್ರೀಯ ಗ್ರಾಹಕರ ದಿನಾಚರಣೆಯ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿ ಬಹುಮಾನ ವಿತರಿಸಲಾಯಿತು.
ಪ್ರಬಂಧ ಸ್ಪರ್ಧೆಯಲ್ಲಿ ಕಬ್ಬೂರ ಸರ್ಕಾರಿ ಪ್ರೌಢಶಾಲೆಯ ಲಕ್ಷ್ಮೀ ಶಿರೋಳ ಪ್ರಥಮ, ಕೇಸ್ತಿ ಸರ್ಕಾರಿ ಪ್ರೌಢಶಾಲೆಯ ಪ್ರಜ್ವಲ್ ಜೈನ್ ದ್ವಿತೀಯ ಹಾಗೂ ಮಾವನೂರ ಸರ್ಕಾರಿ ಪ್ರೌಢಶಾಲೆಯ ಶ್ರೀಧರ ಅಂಕಲಗಿ ತೃತೀಯ ಬಹುಮಾನವನ್ನು ಪಡೆದರು.
ಚಿತ್ರಕಲಾ ಸ್ಪರ್ಧೆಯಲ್ಲಿ ಡಿವೈನ್ ಪ್ರೊವಿಡನ್ ಶಾಲೆಯ ಸಾನಿಕಾ ಗುರವ ಪ್ರಥಮ, ಎಂ.ವಿ. ರೆವಾಡಕರ್ ಶಾಲೆಯ ಪಾರ್ಥ ಗುಂಜಿಕಾನ ದ್ವಿತೀಯ, ಎಂ.ವಿ. ರೆವಾಡಕರ್ ಶಾಲೆಯ ಸುದೀಪ ಹೆಗಡೆ ಮತ್ತು ಸೆಂಟ್ ಮೀರಾ ಶಾಲೆಯ ಸುಜನಾ ಗೊಡಬಲೆ ತೃತೀಯ ಬಹುಮಾನವನ್ನು ಗಳಿಸಿದರು.
ಈ ಎರಡು ಸ್ಪರ್ಧೆಗಳಲ್ಲಿ ನಗರದ ಸರ್ಕಾರಿ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯ 8 ವಿದ್ಯಾರ್ಥಿನಿಯರು ಭಾಗವಹಿಸಿದ್ದಕ್ಕಾಗಿ, ಅವರಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಸನ್ಮಾನಿಸಲಾಯಿತು.
ಮಹಿಳಾ ಕಲ್ಯಾಣ ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀಮತಿ ವೈಜಯಂತಿ ಚೌಗಲೆ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರಾದ ಎಸ್.ಎಸ್. ಉಪ್ಪಾರ, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯ ಸದಸ್ಯರಾದ ಶ್ರೀಮತಿ ಜಯಶ್ರೀ ಕಾಜಗಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿವಿಧ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು

Leave A Reply

 Click this button or press Ctrl+G to toggle between Kannada and English

Your email address will not be published.