ಉತ್ತಮ ಸಮಾಜಕ್ಕಾಗಿ

ಮಹಾದಾಯಿ ಹೋರಾಟ ಬೆಳಗಾವಿಯಲ್ಲಿ ಪ್ರತಿಭಟನೆ,

0

ಬೆಳಗಾವಿ: ಮಹಾದಾಯಿ ಹೋರಾಟದ ಕಿಚ್ಚು ಇಂದು ಜ್ವಾಲೆಯಾಗಿ ಮಾರ್ಪಾಟಾಗಿದ್ದು ಯೋಜನೆ ಜಾರಿಗೆ ಒತ್ತಾಯಿಸಿ ಉತ್ತರ ಕರ್ನಾಟಕದೆಲ್ಲೆಡೆ ಪ್ರತಿಭಟನೆ, ರಸ್ತಾರೋಖೊ, ಟೈಯರ್ ಗೆ ಬೆಂಕಿ ಹಚ್ಚಿ ಆಕ್ರೋಶ ಆರಂಭವಾಗಿದೆ. ಮಹಾದಾಯಿಗಾಗಿ ಉತ್ತರ ಕರ್ನಾಟಕ ಬಂದ್ ಹಿನ್ನೆಲೆ ನದಿಪಾತ್ರದ ಬೈಲಹೊಂಗಲ ಪಟ್ಟಣ ಸಂಪೂರ್ಣ ಸ್ತಬ್ದವಾಗಿದೆ. ಬೈಲಹೊಂಗಲದಲ್ಲಿ ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಿ ಬಂದ್ ಗೆ ಜನ ಬೆಂಬಲ ನೀಡಿದ್ದು ಅಂಗಡಿಕಾರರು ಬಾಗಿಲು ತೆರೆದಿಲ್ಲ. ನಗರದಲ್ಲಿ ಸಾರಿಗೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಬೆಳಿಗ್ಗೆ ೧೦ಕ್ಕೆ ಸೇರುವ ಹೋರಾಟಗಾರರಿಂದ ಬೃಹತ್ ಪ್ರತಿಭಟನಾ ರ‌್ಯಾಲಿ ಹೊಮ್ಮಲಿದೆ. ನಂತರ ಉಪ ವಿಭಾಗಾಧಿಕಾರಿಗಳಿಗೆ ಹೋರಾಟಗಾರರು ಮನವಿ ಸಲ್ಲಿಸಲಿದ್ದಾರೆ.ಬೆಳಗಾವಿ: ಅದರಂತೆ ಜಿಲ್ಲಾ ಕೇಂದ್ರಸ್ಥಾನ ಬೆಳಗಾವಿಯಲ್ಲೂ ಬೆಳಂಬೆಳಿಗ್ಗೆ ಕಿಚ್ಚು ಹತ್ತಿದೆ. ಮಹಾದಾಯಿ ಹೋರಾಟ ಉತ್ತರ ಕರ್ನಾಟಕ ಬಂದ್ ಹಿನ್ನೆಲೆ ಬೆಳಗಾವಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ರೈತ ಸಂಘಟನೆಗಳಿಂದ ಪ್ರತಿಭಟನೆ ನಡೆದು ನಿಲ್ದಾಣದ ಮುಂಬಾಗದಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು. ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ದ ದಿಕ್ಕಾರದ ಘೋಷಣೆ ಕೂಗಿ ಪ್ರತಿಭಟನೆ ಮುಂದುವರೆದಿದೆ. ಕರ್ನಾಟಕ ನವ ನಿರ್ಮಾಣ ಸೇನೆ ಮತ್ತು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಕಾರ್ಯಕರ್ತರಿಂದ ಟೈಯರ್ ಗೆ ಬೆಂಕಿ ಹಚ್ಚಲಾಯಿತು.
ಸಂಪೂರ್ಣ ಬಸ್ ಸೇವೆ ಸ್ಥಗೀತಗೊಳಿಸುವಂತೆ ಆಗ್ರಹ ಮಾಡಲಾಯಿತು.

ರೈತ ಮುಖಂಡ ರಾಘವೇಂದ್ರ ನಾಯಕ್, ಕನ್ನಡ ಪರ ಹೋರಾಟಗಾರ ಬಾಬು ಸಂಗೊಂಡಿ ನೇತ್ರತ್ವದಲ್ಲಿ ನೂರಾರು ರೈತರು ಪ್ರತಿಭಟನೆಯಲ್ಲು ಭಾಗವಹಿಸಿದರು. ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ.

ಮಹಾದಾಯಿ ಕಿಚ್ಚು: ಹುನಗುಂದ ಬಂದ್

ಬೆಳಗಾವಿ/ ಬಾಗಲಕೋಟ: ಮಹದಾಯಿ ನಿರಂತರ ಹೋರಾಟಕ್ಕೆ 900 ದಿನ ಕಳೆದರೂ ರಾಜ್ಯ ಮತ್ತು ಕೇಂದ್ರ ಸರಕಾರಗಳು ದಿವ್ಯ ನಿರ್ಲಕ್ಷ್ಯ ವಹಿಸಿವೆ ಎಂದು ಆರೋಪಿಸಿ ರಾಜ್ಯ ರೈತಸಂಘ ಹುನಗುಂದ ತಾಲ್ಲೂಕು ಬಂದ್ ಗೆ ಕರೆ ನೀಡಿದ್ದು, ಇಂದು ಬೆಳಿಗ್ಗೆಯಿಂದ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿದೆ. ಬಂದ್ ಹಿನ್ನೆಲೆಯಲ್ಲಿ ಬೆಳ್ಳಂಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿಗೆ ಲಗ್ಗೆ ಇಟ್ಟ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದರು. ರಸ್ತೆ ಮದ್ಯೆ ಟೈರ್ ಗೆ ಬೆಂಕಿ ಹಚ್ಚಿ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಈ ಧೀಡಿರ್ ರಸ್ತೆ ತಡೆಯಿಂದ ಸಾವಿರಾರು ವಾಹನಗಳು ಕಿಲೋಮೀಟರ್ ಗಟ್ಟಲೇ ಸಾಲುಗಟ್ಟಿ ನಿಂತಿದ್ದವು. ಅಲ್ಲಿನ ರೈತ ಮುಖಂಡ ಗುರು ಗಾಣಿಗೇರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆದಿದ್ದು, ಮುಂದುವರೆದಿದೆ.

ಮಹಾದಾಯಿ ಹೋರಾಟಕ್ಕೆ ವಕೀಲರ ಬೆಂಬಲ: ಬೆಳಗಾವಿ ನಗರ ಸಹಜ

ಬೆಳಗಾವಿ: ಹಸಿರು ಸೇನೆ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕನ್ನಡಪರ ಸಂಘಟನೆಗಳ ವತಿಯಿಂದ ನಡೆದಿರುವ ಮಹಾದಾಯಿ ಹೋರಾಟ ಹಿನ್ನೆಲೆಯ ಇಂದಿನ ‘ಬಂದ್’ ಹಿನ್ನೆಲೆ ಬೆಳಗಾವಿ ಬಾರ್ ಅಸೋಸಿಯೇಶನ್ ಎಸ್. ಎಸ್. ಕಿವಡಸನ್ನವರ ನೇತೃತ್ವದಲ್ಲಿ ಬೆಂಬಲ ನೀಡಿತು. ಮಹಾದಾಯಿ ನದಿ ನೀರು ಯೋಜನೆ ಜಾರಿಗೆ ಆಗ್ರಹಿಸಿ ತೀವ್ರತೆ ಪಡೆದಿರುವ ಹೋರಾಟದ ಹಿನ್ನೆಲೆಯಲ್ಲಿ ಬೆಳಗಾವಿ ಡಿಸಿ ಕಚೇರಿ ಎದುರು ರೈತರ ಪ್ರತಿಭಟನೆ ನಡೆದು ವಕೀಲರ ಬೆಂಬಲ ಸಿಕ್ಕಿತು. ಮಹಾದಾಯಿ ನದಿ ನೀರು ಪಡೆಯುವವರೆಗೂ ಹೋರಾಟ ಮುಂದೆ ಮಾಡಿ ತೀವೃಗೊಳಿಸುವ ಬಗ್ಗೆ ಮತ್ತು ರಾಜಕೀಯ ಪಕ್ಷಗಳನ್ನು ಬಹಿಷ್ಕರಿಸುವ ಬಗ್ಗೆ ರೈತ ಮುಖಂಡರು ಕರೆ ನೀಡಿದರು.ಮಲಪ್ರಭಾ ನದಿಗೆ ಮಹಾದಾಯಿ ನದಿ ನೀರು ಸೇರಿಸುವ ಹೋರಾಟಕ್ಕೆ ದಶಕಗಳು ಕಳೆದಿವೆ. ರಾಜಕೀಯ ನೇತಾರರನ್ನು ಹೊರಗೆ ಇಟ್ಟು ರಾಜ್ಯದ ಇಡೀ ವಕೀಲರ ಬೆಂಬಲ ನಾವು ಪಡೆಯಬೇಕಿದೆ ಎಂದು ಅಭಿಪ್ರಾಯ ಪಟ್ಟರು. ಶಾಂತರೀತಿಯಿಂದ ರೈತರ ಚಳುವಳಿ ನಡೆಯಬೇಕು ಎಂದು ರೈತ ಮುಖಂಡರು ಆಶಿಸಿದರು.

ಹೋರಾಟದ ವೇದಿಕೆಯಲ್ಲಿ: ರೈತ ಹೋರಾಟಗಾರ, ಮುಖಂಡರಾಗಿದ್ದ ದಿ. ಬಸವರಾಜ ಮಳಲಿ ಅವರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು. ಬೆಳಗಾವಿ ನಗರ ಬೆಳಗಿನ ವೇಳೆ ಬಂದ್ ಆದಂತೆ ಕಂಡುಬಂದರೂ, ರೈತರ ಪ್ರತಿಭಟನೆ ನಡುವೆ ಮಧ್ಯಾಹ್ನದ ಹೊತ್ತಿಗೆ ಸಹಜ ಸ್ಥಿತಿಯತ್ತ ಮರಳಿತು.

ಬೈಲಹೊಂಗಲ-ಯರಗಟ್ಟಿ ಸಂಪೂರ್ಣ ಬಂದ್

ಬೆಳಗಾವಿ: ಮಹದಾಯಿಗಾಗಿ ಉತ್ತರ ಕರ್ನಾಟಕದಲ್ಲಿ ಕಿಚ್ಚು ಹೊತ್ತಿದ್ದು, ಎಲ್ಲ ಪ್ರಮುಖ ಪಟ್ಟಣಗಳಲ್ಲಿ ಬಂದ್ ಮಾಡಿ ಪ್ರತಿಭಟಿಸಲಾಯಿತು. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯರಗಟ್ಟಿಯಲ್ಲಿ ಬಂದ್ ಕಾವು ತೀವೃತೆ ಪಡೆಯಿತು. ಯರಗಟ್ಟಿ ಪಟ್ಟಣದ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಯಿತು. ಗೋಕಾಕ, ಸವದತ್ತಿ, ಬಾಗಲಕೋಟ, ಬೆಳಗಾವಿ ರಾಜ್ಯ ಹೆದ್ದಾರಿ ಬಂದ ಮಾಡಲಾಗಿದೆ. ಪಟ್ಟಣದ ಅಂಗಡಿ ಮುಗ್ಗಟ್ಟುಗಳನ್ನು ಬಂದ ಮಾಡಿ ವ್ಯಾಪಾರಸ್ಥರು, ರೈತರು, ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡರು. ಕೆಂಪು ಟೋಪಿ ಹೊತ್ತ ಮಕ್ಕಳು ಬಂದ್ ಪ್ರತಿಭಟನೆಯಲ್ಲಿ ಭಾಗವಹಿಸಿ ಗಮನ ಸೆಳೆದರು.ಬೈಲಹೊಂಗಲ: ಬೈಲಹೊಂಗಲ ಪಟ್ಟಣ ಸಂಪೂರ್ಣ ಸ್ತಬ್ದವಾಗಿದ್ದು. ಮೂರು ಸಾವಿರ ಮಠದ ಶ್ರೀಗಳ ನೇತ್ರತ್ವದಲ್ಲಿ ಪ್ರತಿಭಟನಾ ರ್ಯಾಲಿ ನಡೆಯಿತು.
ಹೋರಾಟಗಾರನೊಬ್ಬ ಉರುಳು ಸೇವೆ ನಡೆಸಿದ. ಮಹದಾಯಿ ಹೋರಾಟಕ್ಕೆ ಬಿಜೆಪಿ, ಕಾಂಗ್ರೆಸ್ ,ಜೆಡಿಎಸ್ ಪಕ್ಷಗಳಿಂದ ಪಕ್ಷಾತೀತ ಬೆಂಬಲ ವ್ಯಕ್ತವಾಗಿದೆ. ಬಿಜೆಪಿ ಶಾಸಕ ವಿಶ್ವನಾಥ ಪಾಟೀಲ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಮಾಜಿ ಎಂಎಲ್ಸಿ ಮಹಾಂತೇಶ ಕೌಜಲಗಿ ಭಾಗಿಯಾದರು. ಬೈಲಹೊಂಗಲದಲ್ಲಿ ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನ ಬಂದ್ ಆಗಿದ್ದವು. ನಗರದಲ್ಲಿ ಸಾರಿಗೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಹೋರಾಟಗಾರರಿಂದ ಬೃಹತ್ ಪ್ರತಿಭಟನಾ ರ‌್ಯಾಲಿ ನಡೆದು ಗಮನ ಸೆಳೆಯಿತು. ಬೈಲಹೊಂಗಲ ಉಪ ವಿಭಾಗಾಧಿಕಾರಿಗಳಿಗೆ ಹೋರಾಟಗಾರರು ಮನವಿ ಸಲ್ಲಿಸಿದರು.

ಮಹಾದಾಯಿ ಹೋರಾಟಕ್ಕೆ ತಾಲೂಕಾ ಪಂಚಾಯತ ಸಾಥ

ಬೆಳಗಾವಿ: ನಗರದಲ್ಲಿ ನಡೆಯುತ್ತಿರುವ ಕಳಸಾ ಬಂಡೂರಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸುತ್ತಿದ್ದು ಅಲ್ಲಿ ಸ್ಥಳಕ್ಕಾಗಮಿಸಿದ ಬೆಳಗಾವಿ ತಾಲೂಕಾ ಪಂಚಾಯತ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಹೊರಾಟಗಾರರನ್ನು ಉದ್ದೇಶಿಸಿ ಮಾತನಾಡಿದ ತಾಲೂಕಾ ಪಂಚಾಯತ ಅಧ್ಯಕ್ಷ ನೀರಿಗಾಗಿ ಹೋರಾಟ ನಡೆಸುತ್ತಿರುವ ರೈತರಿಗೆ ತಾಲೂಕಾ ಪಂಚಾಯತ ವತಿಯಿಂದ ಸಂಪೂರ್ಣ ಬೆಂಬಲವಿದ್ದು ಈ ನಿಟ್ಟಿನಲ್ಲಿ ತಾಲೂಕಾ ಪಂಚಾಯಿತಿಯಲ್ಲಿ ಠರಾವ ಪಾಸ್ ಮಾಡಲಾಗಿದೆ ಎಂದು ತಿಳಿಸಿದರು. ನಾವೆಲ್ಲ ಪಕ್ಷಾತೀತವಾಗಿ ಈ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದು ರಾಜ್ಯದ ಎಲ್ಲ ಪಕ್ಷಗಳ ಹಿರಿಯ ನಾಯಕರು ಶೀಘ್ರದಲ್ಲಿ ಕೇಂದ್ರ ಸರಕಾರಕ್ಕೆ ನೀಯೋಗ ತೆಗೆದುಕೊಂಡು ಹೋಗಿ ರೈತರಿಗೆ ಅನುಕೂಲ ಮಾಡಿ ಕೊಡಬೇಕೆಂದು ತಿಳಿಸಿದರು.

ಮಹದಾಯಿ ಕಿಚ್ಚು: ನಟ ಶಿವರಾಜ ಕುಮಾರ್ ಗರಂ

ಬೆಂಗಳೂರು: ಯಾವುದೇ ಸಮಸ್ಯೆಗೆ ಹೋಗಬೇಕಾದ್ರೂ ಬಣ್ಣ ಹಚ್ಕೊಂಡು ಹೋಗಬಾರ್ದು. ನಮ್ಮ ಒರಿಜಿನಲ್‌ ಬಣ್ಣ ಇಟ್ಕೊಂಡು ಹೋಗ್ಬೇಕು. ನಾವು ದಡ್ಡರಾ, ನೀವು ದಡ್ಡರಾ.. ಇಡೀ ದೇಶದ ಜನರು ದಡ್ಡರಾ. ಮೂರು ರಾಜಕೀಯ ಪಕ್ಷಗಳು ಈ ಸಮಸ್ಯೆ ಬಗೆಹರಿಸಬೇಕು ಎಂದು ನಟ ಶಿವರಾಜ ಕುಮಾರ್ ಗರಂ ಆದರು. ಮಹದಾಯಿ ಹೋರಾಟಗಾರರು ಮನವಿ ಸಲ್ಲಿಸಲು ಫಿಲಂ ಚೇಂಬರ್ಗೆ ಭೇಟಿ ನೀಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಶಿವರಾಜ ಕುಮಾರ್, ನಾನು ಹೋಗಿ ಕುಳಿತುಕೊಂಡರೆ ಜನ ಬರ್ತಾರೆ ಸೆಲ್ಫಿ ತಗೋತಾರೆ. ಯಾವಾಗ ಬರಬೇಕು ಅಂತ ಹೇಳಿ, ನಾವು ಬರ್ತೀವಿ. ಕಲಾವಿದರು ಬೇರೆ, ರಾಜಕೀಯದಲ್ಲಿರುವ ಕಲಾವಿದರು ಬೇರೆ. ಯಾವುದೋ ಪಕ್ಷದ ಕಚೇರಿ ಮುಂದೆ ಹೋಗೋಕೆ ಆಗಲ್ಲ. ನಾವು ಕಲಾವಿದರು ನಮಗೆ ರಾಜಕೀಯ ಬೇಕಾಗಿಲ್ಲ ಎಂದರು.

ರೈತಸೇನಾ ರಾಜ್ಯಾಧ್ಯಕ್ಷ ವೀರೇಶ್ ಸೊಬರದಮಠ ಮಾತನಾಡಿ, ಬೆಂಗಳೂರಿನಿಂದ ಹುಬ್ಬಳ್ಳಿಗೆ, ನಮಗೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ನೆರವು ನೀಡಿದೆ. ತಮ್ಮ ಕೆಲಸವನ್ನು ಬದಿಗೊತ್ತಿ ನಮಗೆ ನೆರವು ನೀಡಿದ್ದೀರಿ. ಅದೇ ರೀತಿ ನರಗುಂದಕ್ಕೆ ಒಮ್ಮೆ ಬರಬೇಕು ಎಂದು ಮನವಿ ಮಾಡುತ್ತೇನೆ. ನೀವೆಲ್ಲ ಬಂದರೆ ನಮ್ಮ ಹೋರಾಟಕ್ಕೆ ಶಕ್ತಿ ಬರುತ್ತದೆ ಎಂದು ಮನವಿ ಮಾಡಿದರು.ಫಿಲಂ ಛೇಂಬರ್ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ, ನರಗುಂದ ಹೋರಾಟಕ್ಕೆ ನಾವೂ ಹೋಗುತ್ತೇವೆ. ಜನವರಿಯಲ್ಲಿ ನರಗುಂದದಲ್ಲಿ ಹೋರಾಟ ಮಾಡುತ್ತೇವೆ. ಅದಕ್ಕೆ ಒಂದು ವಾರದಲ್ಲಿ ದಿನಾಂಕ ನಿಗದಿ ಮಾಡುತ್ತೇವೆ. ರಾಜಕೀಯರಹಿತ ಹೋರಾಟ ಮಾಡಲು ನಾವು ಸಿದ್ಧ. ನಾವು ಕೇಳುತ್ತಿರುವುದು 7.5 ಟಿಎಂಸಿ ಮಾತ್ರ. ಹಾಗಾಗಿ ಪ್ರಧಾನಿಯವರು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಇತ್ಯರ್ಥಪಡಿಸಬೇಕೆಂದು ಮನವಿ ಮಾಡಿದರು.

 

Leave A Reply

 Click this button or press Ctrl+G to toggle between Kannada and English

Your email address will not be published.