ಉತ್ತಮ ಸಮಾಜಕ್ಕಾಗಿ

ವಸತಿ ನಿಲಯ-ಮಣ್ಣು ಪರೀಕ್ಷಾ ಪ್ರಯೋಗಾಲಯ ಉದ್ಘಾಟನೆ

0

ಸಕ್ಕರೆ-ಕಬ್ಬು ಉತ್ಪಾದನೆಯಲ್ಲಿ ರಾಜ್ಯಕ್ಕೆ 3ನೇ ಸ್ಥಾನ
– ಸಚಿವೆ ಗೀತಾ ಮಹದೇವಪ್ರಸಾದ
ಬೆಳಗಾವಿ: ನಗರದ ಎಸ್. ನಿಜಲಿಂಗಪ್ಪ ಸಕ್ಕರೆ ಸಂಶೋಧನಾ ಸಂಸ್ಥೆಯಲ್ಲಿ ನೂತನವಾಗಿ ನಿರ್ಮಿಸಿದ ಶಿಕ್ಷಾರ್ಥಿ ವಸತಿ ನಿಲಯ ಹಾಗೂ ಮಣ್ಣು ಪರೀಕ್ಷಾ ಪ್ರಯೋಗಾಲಯವನ್ನು ಸಣ್ಣ ಕೈಗಾರಿಕೆ ಮತ್ತು ಸಕ್ಕರೆ ಸಚಿವರಾದ ಶ್ರೀಮತಿ ಡಾ. ಗೀತಾ ಮಹದೇವಪ್ರಸಾದ (ಎಂ.ಸಿ. ಮೋಹನಕುಮಾರಿ) ಅವರು ಉದ್ಘಾಟಿಸಿದರು.
ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಕ್ಕರೆ ಹಾಗೂ ಕಬ್ಬು ಉತ್ಪಾದನೆಯಲ್ಲಿ ನಮ್ಮ ರಾಜ್ಯ 3ನೇ ಸ್ಥಾನವನ್ನು ಹೊಂದಿದೆ. ರಾಜ್ಯದಲ್ಲಿ ಕಬ್ಬು ಬೆಳೆಯಲು ಹಾಗೂ ಸಕ್ಕರೆ ಅಂಶವನ್ನು ಹೆಚ್ಚು ಪಡೆಯಲು ಅನುಕೂಲಕರ ವಾತಾವರಣ ಇದೆ ಎಂದು ತಿಳಿಸಿದರು.
ಕಬ್ಬು ಸಂಶೋಧನೆ ಮತ್ತು ಇನ್ನಿತರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳುವುದರಿಂದ ಸಕ್ಕರೆ ಉದ್ದಿಮೆಯ ಸುಸ್ಥಿರ ಅಭಿವೃದ್ಧಿ ಸಾಧ್ಯವಿದೆ. ಈ ದಿಶೆಯಲ್ಲಿ ಸಕ್ಕರೆ ಉದ್ದಿಮೆ ಸುಧಾರಣೆಗೆ ಹಾಗೂ ಕಬ್ಬು ಬೆಳೆಯ ಉತ್ಪಾದನೆ ಹೆಚ್ಚಿಸಲು ಹೊಸ ಆವಿಷ್ಕಾರಗಳ ಅವಶ್ಯಕತೆ ಇದೆ ಎಂದು ಹೇಳಿದರು.
ಹೊಸ ತಳಿಗಳ ಸಂಶೋಧನೆ ಹಾಗೂ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಗರದ ನಿಜಲಿಂಗಪ್ಪ ಸಕ್ಕರೆ ಸಂಶೋಧನಾ ಕೇಂದ್ರದಲ್ಲಿ ಮಣ್ಣು ಪರೀಕ್ಷಾ ಪ್ರಯೋಗಾಲಯ ಹಾಗೂ ವಸತಿ ನಿಲಯವನ್ನು ಪ್ರಾರಂಭಿಸಲಾಗಿದ್ದು, ರೈತರು ಹಾಗೂ ಸಂಶೋಧನಾರ್ಥಿಗಳು ಇವುಗಳ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು.

ಸಂಶೋಧನಾ ಕೇಂದ್ರದಲ್ಲಿ ರೈತರು, ಸಕ್ಕರೆ ಕಾರ್ಖಾನೆಗಳ ಸಿಬ್ಬಂದಿಗೆ ಅಗತ್ಯ ಪ್ರಾಯೋಗಿಕ ತರಬೇತಿ ನೀಡಲಾಗುವುದು. ಎಸ್ಸೆಸ್ಸಲ್ಸಿ, ಪಿಯುಸಿ ಹಾಗೂ ಬಿಎಸ್ಸಿ ವಿದ್ಯಾರ್ಥಿಗಳಿಗೆ ಅಲ್ಪಾವಧಿ ತರಬೇತಿ ಕೋರ್ಸಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ನಗರದ ನಿಜಲಿಂಗಪ್ಪ ಸಂಶೋಧನಾ ಸಂಸ್ಥೆಯು ಅತ್ಯುನ್ನತ ಸೌಲಭ್ಯಗಳನ್ನು ಹೊಂದಿದೆ. ಈ ಸಂಸ್ಥೆಗೆ ಇನ್ನಿತರ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸಿದ್ಧ ಎಂದರು.
ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಬ್ಬು ಬೆಳೆಗಾರರ, ರೈತರ ತೊಂದರೆ ನಿವಾರಣೆಗೆ ಸರ್ಕಾರ ಸದಾ ಬದ್ಧವಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಕಬ್ಬನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ ಹಾಗೂ ರಾಜ್ಯದಲ್ಲಿಯೇ ಅಧಿಕ ಸಕ್ಕರೆ ಕಾರ್ಖಾನೆಗಳು ಬೆಳಗಾವಿಯಲ್ಲೇ ಇವೆ. ಸಕ್ಕರೆ ರೈತರಿಗೆ ಲಾಭ ತರುವ ಉತ್ಪನ್ನವಾಗಿದ್ದು, ಈ ವರ್ಷ ಕಬ್ಬು ಉತ್ಪಾದನೆ ಹೆಚ್ಚಾಗಿರುವುದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಶ್ರೀ ನಿಜಲಿಂಗಪ್ಪ ಸಕ್ಕರೆ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ. ಆರ್.ಬಿ. ಕಂಡಗಾವಿ ಅವರು ಮಾತನಾಡಿ, ಸಂಸ್ಥೆಯಲ್ಲಿ ಐದು ನೂತನ ಕಬ್ಬು ತಳಿಗಳು ಇದ್ದು, ಅಂಗಾಂಶ ಕೃಷಿ ಪ್ರಯೋಗಾಲಯದ ಮೂಲಕ 2.50 ಲಕ್ಷ ಸಸಿಗಳನ್ನು ರೈತರಿಗೆ ಹಾಗೂ ಸಕ್ಕರೆ ಕಾರ್ಖಾನೆಗಳಿಗೆ ವಿತರಿಸಲಾಗಿದೆ. ಇವು ಹೆಚ್ಚು ಇಳುವರಿ ನೀಡುತ್ತವೆ ಹಾಗೂ ಉತ್ಪಾದನೆಯು ಹೆಚ್ಚಾಗುತ್ತದೆ. ನಾಟಿ ಮತ್ತು ಕಟಾವು ಮಾಡಲು ಈ ತಳಿಗಳು ಹೆಚ್ಚು ಅನುಕೂಲವಾಗಿವೆ ಎಂದು ತಿಳಿಸಿದರು.
ಶ್ರೀ ನಿಜಲಿಂಗಪ್ಪ ಸಕ್ಕರೆ ಸಂಶೋಧನಾ ಸಂಸ್ಥೆಯ ಉಪಾಧ್ಯಕ್ಷರಾದ ಜಗದೀಶ ಗುಡಗುಂಟಿ, ಸಕ್ಕರೆ ಆಯುಕ್ತರಾದ ಡಾ. ಅಜಯ ನಾಗಭೂಷಣ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.