ಉತ್ತಮ ಸಮಾಜಕ್ಕಾಗಿ

ಖಾನಾಪೂರಕ್ಕೆ ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ ಭೇಟಿ ಸರ್ಕಾರಿ ಯೋಜನೆ: ಸಮರ್ಪಕ ಅನುಷ್ಠಾನಕ್ಕೆ ಸೂಚನೆ

0

ಬೆಳಗಾವಿ: ಸರ್ಕಾರದ ಹೊಸ ಯೋಜನೆಗಳಾದ ಇಂದಿರಾ ಕ್ಯಾಂಟೀನ್, ಮಾತೃಪೂರ್ಣ ಯೋಜನೆ ಹಾಗೂ ಸ್ವಚ್ಛಭಾರತ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಕ್ರಮಕೈಗೊಂಡು ಅವುಗಳ ಲಾಭ ಸಾರ್ವಜನಿಕರಿಗೆ ತಲುಪುವ ನಿಟ್ಟಿನಲ್ಲಿ ಅಧಿಕಾರಿಗಳು ಶ್ರಮಿಸಬೇಕು ಎಂದು ಬೆಳಗಾವಿ ಪ್ರಾದೇಶಿಕ ಆಯುಕ್ತರಾದ ಶಿವಯೋಗಿ ಕಳಸದ ಅವರು ಸೂಚಿಸಿದರು.
ಖಾನಾಪೂರ ತಹಶೀಲ್ದಾರ ಕಚೇರಿಗೆ ಗುರುವಾರ(ಡಿ.28) ಭೇಟಿ ನೀಡಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿದ ಬಳಿಕ ತಾಲೂಕಮಟ್ಟದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಖಾನಾಪುರ ಪಟ್ಟಣದಲ್ಲಿ ಪಂಚಾಯತ ರಾಜ್ ಇಂಜನೀಯರಿಂಗ್ ಇಲಾಖೆಯವರಿಂದ ನಿರ್ಮಾಣವಾಗುತ್ತಿರುವ ಸರ್ಕಾರಿ ಕಾಲೇಜು ಕಟ್ಟಡ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪ್ರಾದೇಶಿಕ ಆಯುಕ್ತರು, ಸದರಿ ಕಾಮಗಾರಿಯನ್ನು ತ್ವರಿತವಾಗಿ ಕೈಗೊಂಡು ನಿಗದಿತ ಅವಧಿಯೊಳಗೆ ಸಂಪೂರ್ಣಗೊಳಿಸಲು ನಿರ್ದೇಶನ ನೀಡಿದರು.

ನಂದಗಡ-ಸೂಚನಾಫಲಕ ಅಳವಡಿಕೆಗೆ ಸೂಚನೆ:
ನಂದಗಡದ ಸಂಗೊಳ್ಳಿ ರಾಯಣ್ಣ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ ಪ್ರಾದೇಶಿಕ ಆಯುಕ್ತ ಕಳಸದ ಅವರು, ಸದರಿ ಸ್ಥಳದಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವ ರೀತಿಯಲ್ಲಿ ಸೂಚನಾಫಲಕಗಳನ್ನು ಅಳವಡಿಸಲು ಹಾಗೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಕ್ರಮಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಂತರ ಕಕ್ಕೇರಿ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ ಇಲಾಖೆಯವರಿಂದ ಹೊಸದಾಗಿ ನಿರ್ಮಿಸಲಾದ ಮೇಲ್ಮಟ್ಟದ ಜಲಾಗಾರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಉಪ ವಿಭಾಗಾಧಿಕಾರಿ ಕವಿತಾ ಯೋಗಪ್ಪನವರ, ಖಾನಾಪುರ ತಹಶೀಲ್ದಾರ ಶಿವಾನಂದ ಉಳ್ಳೇಗಡ್ಡಿ ಹಾಗೂ ಲೋಕೋಪಯೋಗಿ ಇಲಾಖೆ ಮತ್ತು ಪಂಚಾಯತ್ ರಾಜ್ ಇಂಜನೀಯರಿಂಗ್ ವಿಭಾಗದ ಸಹಾಯಕ ಅಭಿಯಂತರರು ಹಾಜರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.