ಉತ್ತಮ ಸಮಾಜಕ್ಕಾಗಿ

ಪ್ರತಿಯೊಬ್ಬರಿಗೂ ಮಾನವೀಯತೆ ಅಗತ್ಯ – ಶ್ರೀಮತಿ ಮಂಗಲಾ ಮೆಟಗುಡ್ಡ

0

ಬೆಳಗಾವಿ: ರಾಷ್ಟ್ರಕವಿ ಕುವೆಂಪು ಅವರು ವಿಶ್ವ ಮಾನವ ಧರ್ಮವನ್ನು ಎತ್ತಿ ಹಿಡಿದು ಇಡೀ ವಿಶ್ವಕ್ಕೆ ಮಾದರಿಯಾಗಿದ್ದಾರೆ. ಪ್ರತಿಯೊಬ್ಬರಿಗೂ ಮಾನವೀಯತೆ ಅಗತ್ಯವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಲಾ ಮೆಟಗುಡ್ಡ ಅವರು ಹೇಳಿದರು.
ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನಾಚರಣೆ ಅಂಗವಾಗಿ ಶುಕ್ರವಾರ (ಡಿ.29) ಹಮ್ಮಿಕೊಂಡಿದ್ದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಇಂದು ದೇಶದಲ್ಲಿ ರಾಜ್ಯ, ರಾಜ್ಯಗಳ ಮಧ್ಯೆ ಉಂಟಾಗುತ್ತಿರುವ ನೆಲ, ಜಲದ ಸಮಸ್ಯೆಗಳನ್ನು ನಾವು ಮಾನವೀಯ ನೆಲೆಗಟ್ಟಿನಲ್ಲಿ ಬಗೆಹರಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಕುವೆಂಪು ಅವರು ಮಕ್ಕಳು, ಯುವಕರು, ಮಹಿಳೆಯರು, ಹಿರಿಯರು ಸೇರಿದಂತೆ ಎಲ್ಲ ವರ್ಗದವರಿಗೂ ಇಷ್ಟವಾಗುವಂತಹ ಕೃತಿಗಳನ್ನು ರಚಿಸಿದ್ದಾರೆ. ಅವರು ದೊಡ್ಡ ವಿಷಯಗಳ ಜೊತೆಗೆ ತಮ್ಮ ಸುತ್ತಮುತ್ತಲಿನ ವಸ್ತು, ವಿಷಯಗಳ ಬಗ್ಗೆಯೂ ಕೃತಿ, ಕವನಗಳನ್ನು ರಚಿಸಿ ಪ್ರಸಿದ್ಧಿ ಪಡೆದಿದ್ದಾರೆ ಎಂದರು.
ಕುವೆಂಪು ಅವರ ಬಗ್ಗೆ ಮಕ್ಕಳು ತಿಳಿದುಕೊಳ್ಳುವುದು ಅವಶ್ಯವಾಗಿದ್ದು, ಶಾಲಾ, ಕಾಲೇಜುಗಳ ಆಡಳಿತ ಮಂಡಳಿಯವರು ತಮ್ಮ ಗ್ರಂಥಾಲಯಗಳಲ್ಲಿ ಕುವೆಂಪು ಅವರ ಕೆಲವು ಕೃತಿಗಳನ್ನು ಇಡುವ ವ್ಯವಸ್ಥೆ ಮಾಡಬೆಕು ಎಂದು ಸಲಹೆ ನೀಡಿದರು.
ವಿಶ್ವ ಮಾನವ ಪ್ರಶಸ್ತಿ ಪುರಸ್ಕøತರಾದ ಡಾ. ಗುರುಪಾದ ಮರಿಗುದ್ದಿ ಅವರು ಉಪನ್ಯಾಸ ನೀಡಿ, ಕುವೆಂಪು ಅವರು ಪ್ರತಿಯೊಬ್ಬರಿಗೂ ಆದರ್ಶಪ್ರಾಯವಾಗಿದ್ದಾರೆ. ರಾಜ್ಯ ಹಾಗೂ ದೇಶಕ್ಕಾಗಿ ಕುವೆಂಪು ಅವರ ಸಾಹಿತ್ಯದ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ಕುವೆಂಪು ಅವರು ಮಹಾತ್ಮಾ ಗಾಂಧೀಜಿ ಅವರಿಂದ ಅತ್ಯಂತ ಪ್ರಭಾವಿತರಾಗಿದ್ದರು. 1924ರ ಡಿಸೆಂಬರ್‍ನಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಮಹಾ ಅಧಿವೇಶನದಲ್ಲಿ ಮಹಾತ್ಮಾ ಗಾಂಧೀಜಿ ಅವರು ಪಾಲ್ಗೊಳ್ಳುವ ವಿಷಯ ತಿಳಿದ ಕುವೆಂಪು ಅವರು ಅಂದು ಬೆಳಗಾವಿಗೆ ಆಗಮಿಸಿ ಗಾಂಧೀಜಿ ಅವರನ್ನು ಕಣ್ತುಂಬಿಕೊಂಡಿದ್ದರು ಹಾಗೂ ಅಂದಿನಿಂದ ಸ್ವದೇಶಿ ವಸ್ತುಗಳನ್ನೇ ಬಳಸುವುದಾಗಿ ಪಣ ತೊಟ್ಟಿದ್ದರು ಎಂದು ತಿಳಿಸಿದರು.
ಮಾಜಿ ಮಹಾಪೌರರು ಹಾಗೂ ಹಿರಿಯ ಕನ್ನಡ ಹೋರಾಟಗಾರರಾದ ಸಿದ್ದನಗೌಡ ಪಾಟೀಲ ಅವರು ಮಾತನಾಡಿ, ಮಕ್ಕಳು ಹಾಗೂ ಯುವಕರು ಕುವೆಂಪು ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ರಾಜ್ಯ ಸರ್ಕಾರ ರಾಷ್ಟ್ರಕವಿ ಪ್ರಶಸ್ತಿ ನೀಡುವ ಕಾರ್ಯವನ್ನು ನಿಲ್ಲಿಸದೇ, ಮುಂದುವರೆಸಿಕೊಂಡು ಹೋಗಬೇಕೆಂದು ಮನವಿ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ಬಿ.ಆರ್. ರವಿಕಾಂತೇಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬರೂ ವೈಚಾರಿಕತೆಯನ್ನು ಅಳವಡಿಸಿಕೊಂಡು ಬದುಕು ಸಾಗಿಸಬೇಕು. ಕನ್ನಡವೇ ನಿತ್ಯ, ಕನ್ನಡವೇ ಸತ್ಯ ಎಂಬುದು ಉಸಿರಾಗಬೇಕು ಎಂದು ಹೇಳಿದರು.
ಸಾಧನೆಗೆ ದೃಢಮನಸ್ಸು, ದೃಢಸಂಕಲ್ಪ ಹಾಗೂ ಸತತ ಪರಿಶ್ರಮ ಅಗತ್ಯ. ಯುವಕರು ಕುವೆಂಪು ಅವರ ವೈಚಾರಿಕತೆ ಹಾಗೂ ಸಾಧನೆಗಳನ್ನು ಪಾಲಿಸಬೇಕು ಎಂದರು.
ಕುವೆಂಪು ಅವರ ಲೇಖನ ಹಾಗೂ ಕವಿತೆಗಳು ಸದಾ ಪ್ರಸ್ತುತವಾಗಿವೆ. ಎಲ್ಲ ಚಳವಳಿಗಳ ವೈಶಿಷ್ಟ್ಯವನ್ನು ಅವರ ಲೇಖನ ಹಾಗೂ ಕವಿತೆಗಳಲ್ಲಿ ಕಾಣಬಹುದಾಗಿದೆ. ಕುವೆಂಪು ಅವರ ವಿಶ್ವಮಾನವ ಪ್ರಜ್ಞೆ ಹಾಗೂ ತತ್ವ ಜಗತ್ತಿನಲ್ಲೇ ಶ್ರೇಷ್ಠವಾಗಿದೆ ಎಂದು ತಿಳಿಸಿದರು. ಕುವೆಂಪು ಅವರ ಕವನವೊಂದನ್ನು ರವಿಕಾಂತೇಗೌಡ ಅವರು ವಾಚನ ಮಾಡಿದರು.
ಸಾಹಿತಿ ಎಲ್.ಎಸ್. ಶಾಸ್ತ್ರೀ ಹಾಗೂ ಶ್ರೀಮತಿ ಭಾರತಿ ಭಟ್ ಅವರು ಗಮಕ ವಾಚನ ಮಾಡಿದರು. ಮಂಗಲಾ ಮಠದ ಹಾಗೂ ತಂಡದವರು ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಶೈಲ ಕರಿಶಂಕರಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನೆಹರು ಯುವ ಸಬಲೀಕರಣ ಕೇಂದ್ರದ ಸಮನ್ವಯಾಧಿಕಾರಿ ಎಸ್.ಬಿ. ಜಮಾದಾರ ಅವರು ನಿರೂಪಿಸಿದರು.
ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ, ಉಪವಿಭಾಗಾಧಿಕಾರಿ ಕವಿತಾ ಯೋಗಪ್ಪನವರ, ತಹಶೀಲ್ದಾರ ಮಂಜುಳಾ ನಾಯಕ, ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಅರುಣ ಕಟಾಂಬಳೆ, ಭಾರತೀಯ ಬೌದ್ಧ ಸಭೆಯ ಆಯುಷಮತಿ ಕೃಷ್ಣಾಬಾಯಿ ಸಾಮ್ರಾಟ, ನಗರದ ಸಾತ ಸಂಗತ ಗುರುದ್ವಾರದ ಗುರ್ಪಿತ ಸಿಂಗ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿವಿಧ ಶಾಲಾ, ಕಾಲೇಜುಗಳ ನೂರಾರು ವಿದ್ಯಾರ್ಥಿಗಳು, ಶಿಕ್ಷಕರು, ಸಾಹಿತಿಗಳು ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.