ಉತ್ತಮ ಸಮಾಜಕ್ಕಾಗಿ

ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

0

ಬೆಳಗಾವಿ/ಗೋಕಾಕ: ವಿಜಯಪುರದಲ್ಲಿ ದಲಿತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಆರೋಪಿಗಳಿಗೆ ಶೀಘ್ರ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಗೋಕಾಕ ತಾಲೂಕಾ ವತಿಯಿಂದ ಶನಿವಾರದಂದು ನಗರದ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲ ಕಾಲ ರಸ್ತೆ ತಡೆ ನಡೆಸಿ ಮತ್ತು ಡಾ. ಅಂಬೇಡಕರ ಅವರು ರಚಿಸಿದ ಸಂವಿಧಾನವನ್ನು ಬದಲಾವಣೆ ಮಾಡುತ್ತೇನೆ ಎಂದು ಹೇಳಿಕೆ ನೀಡಿರುವ ಬಿಜೆಪಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿ ತಹಶೀಲ್ದಾರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಡಿಎಸ್‍ಎಸ್ ತಾಲೂಕಾ ಸಂಚಾಲಕ ಲಕ್ಷ್ಮಣ ತೆಳಗಡೆ ಮಾತನಾಡಿ ವಿಜಯಪುರದ ದಲಿತ ಬಾಲಕಿ ದಾನಮ್ಮಳ ಮೇಲೆ ಅತ್ಯಾಚಾರವೆಸಗಿದ ದುಷ್ಕರ್ಮಿಗಳನ್ನು ಸಾರ್ವಜನಿಕ ಮಧ್ಯೆದಲ್ಲಿಯೇ ಗೆಲ್ಲಿಗೇರಿಸಬೇಕು. ಸರ್ಕಾರ ದಲಿತ ಸಮುದಾಯದ ಮಹಿಳೆಯರಿಗೆ, ಜನರಿಗೆ ಸೂಕ್ತ ರಕ್ಷಣೆ ನೀಡಬೇಕು. ಅತ್ಯಾಚಾರವಾಗಿ ಕೊಲೆಯಾದ ದಲಿತ ಬಾಲಕಿ ದಾನಮ್ಮಳ ಕುಟುಂಬಕ್ಕೆ ಸರ್ಕಾರಿ ನೌಕರಿ ಹಾಗೂ ಪರಿಹಾರ ಧನ ನೀಡಬೇಕೆಂದು ಒತ್ತಾಯಿಸಿದರು.

ಸಂವಿಧಾನವನ್ನು ಬದಲಾವಣೆ ಮಾಡುತ್ತೇನೆ ಎಂದು ಹೇಳಿಕೆ ನೀಡಿರುವ ಬಿಜೆಪಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ವಿರುದ್ಧ ಕಿಡಿಕಾರಿದ ದಲಿತ ಮುಖಂಡರು ಸಂವಿಧಾನಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡಕರ ಅವರು ಬರೆದ ಸಂವಿಧಾನವನ್ನು ಬದಲಾವಣೆ ಮಾಡಲು ಹೋರಟಿರುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರಿಗೆ ಬುದ್ಧಿ ಭ್ರಮೆಯಾಗಿದೆ. ಅರೆ ಪ್ರಜ್ಞೆಯಲ್ಲಿರುವ ಸಚಿವರು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಸಂವಿಧಾನಕ್ಕೆ ಅವಮಾನ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಿ ಪ್ರಜಾಪ್ರಭುತ್ವದ ವಿರೋಧಿಗಳನ್ನು ರಾಜ್ಯದಿಂದ ಗಡಿಪಾರು ಮಾಡಬೇಕು. ಕೇಂದ್ರ ಸಚಿವ ಸಂಪುಟದಿಂದ ಇವರನ್ನು ತಗೆದು ಹಾಕಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಎಲ್.ಬಿ.ತೆಳಗಡೆ, ಶ್ರೀಕಾಂತ ತಳವಾರ, ರಮೇಶ ಸಣ್ಣಕ್ಕಿ, ಸುನೀಲ ಹಿರಗನ್ನವರ, ಶಾಬಪ್ಪ ಸಣ್ಣಕ್ಕಿ, ಆರ್.ಎಸ್. ಕಡಕೋಳ, ಗೋವಿಂದ ಕಳ್ಳಿಮನಿ, ಬಿ.ಕೆ.ಮೇತ್ರಿ, ಎಂ.ಎಸ್.ಅಮ್ಮಣಗಿ, ಎಸ್.ಎಸ್.ಕಂಕಣವಾಡಿ, ಹನಮಂತ ಸೊಂಡಿ, ಸುಂದರವ್ವ ಕಟ್ಟಿಮನಿ, ಸುನೀಲ ಕೊಟಬಾಗಿ, ಮಹಾನಿಂಗ ತೆಳಗೇರಿ, ಬಸವರಾಜ ಕಾಡಾಪೂರ, ರಮೇಶ ಈರಗಾರ, ಸುರೇಶ ಸಣ್ಣಕ್ಕಿ, ಮಾನಿಂಗ ಕೆಂಚನ್ನವರ, ಮನೋಹರ ಉದ್ದಪ್ಪನವರ, ಶಿವಾನಂದ ಹೊಸಮನಿ, ಕರ್ನಾಟಕ ರಾಜ್ಯ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ಡಾ. ರಾಜೇಂದ್ರ ಸಣ್ಣಕ್ಕಿ, ಶಿವು ಪಾಟೀಲ ಸೇರಿದಂತೆ ದಲಿತ ಮುಖಂಡರು ಉಪಸ್ತಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.