ಉತ್ತಮ ಸಮಾಜಕ್ಕಾಗಿ

ಸರಕಾರಿ ಪ್ರಾಥಮಿಕ ಕನ್ನಡ ಶಾಲೆಗೆ ಮರುಜೀವ ತುಂಬುವುದು ಯಾವಾಗ?: ನಿರ್ಲಕ್ಷಿಸುತ್ತಿರುವ ಶಿಕ್ಷಣ ಇಲಾಖೆ

0

ಖಾನಾಪುರ: ತಾಲೂಕಿನ ಕಕ್ಕೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸ್ವಾತಂತ್ರ್ಯಪೂರ್ವ ಬ್ರಿಟೀಷ್‍ರ ಆಳ್ವಿಕೆಯ ಕಾಲದ 1887 ರಲ್ಲಿ ಪ್ರಾರಂಭವಾಗಿ ಗುಡಿ-ಗುಂಡಾರಗಳಲ್ಲಿ ನಡೆಯುತ್ತಿದ್ದ ಶಾಲೆಗೆ 1963 ರಲ್ಲಿ ಕಲ್ಲಿನ ಹೊಸ ಕಟ್ಟಡ ಭಾಗ್ಯ ಸಿಕ್ಕಿತು. ಶಾಲೆಗೆ 130 ವರ್ಷ ಹಾಗೂ ಕಟ್ಟಡಕ್ಕೆ 54 ವರ್ಷ ವಯಸ್ಸಾಗಿದ್ದು, ಮೇಲ್ಛಾವಣಿಯ ಕಟ್ಟಿಗೆ ಗೆದ್ದಲು ತಿಂದು ಬೀಳುತ್ತಿವೆ, ಒಡೆದ ಹಂಚುಗಳು ಮತ್ತು ಸೂಕ್ತ ನಿರ್ವಹಣೆ ಇಲ್ಲದೆ ಮುರಿದು ಬೀಳುವ ಸ್ಥಿತಿಯಲ್ಲಿ ಇರುವ ವರ್ಗಕೋಣೆಗಳು ದುರಸ್ಥಿ ಭಾಗ್ಯಕ್ಕಾಗಿ ದಾರಿ ಕಾಯುತ್ತಿವೆ. ಕೆಲ ಕೋಣೆಗಳನ್ನು ಮರುನಿರ್ಮಾಣ ಮಾಡುವುದು ಅನಿವಾರ್ಯ ಇದೆ. ಕಳೆದ 2-3 ವರ್ಷಗಳಿಂದ ವರ್ಗಕೋಣೆಗಳು ಮಳೆಗಾಲದಲ್ಲಿ ಎಲ್ಲಕಡೆ ಸೋರುವುದರಿಂದ ವಿದ್ಯಾರ್ಥಿಗಳು ಮೈತೋಯಿಸಿಕೊಂಡು ಗುರುಗಳಿಂದ ಅಭ್ಯಾಸ ಕೇಳುವ ದಯನೀಯ ಸ್ಥಿತಿ ಇದೆ. ಕಟ್ಟಡ ಭಾಗ ಮೈಮೇಲೆ ಬೀಳಬಹುದೆಂಬ ಪ್ರಾಣ ಭಯ ಇದೆ.
ಸುಮಾರು ವರ್ಷಗಳ ವಿಪರೀತ ಮಳೆಯ ನಂತರ ಇಲಾಖೆ ಪರಿಶೀಲನೆ ಮಾಡಿ, ಕಕ್ಕೇರಿ ಶಾಲೆಯ ಬೀಳುವ ಹಂತದಲ್ಲಿರುವ 3 ವರ್ಗಕೋಣೆಗಳನ್ನು ಕೆಡವಿ ಹೊಸ ಕಟ್ಟಡ ಕಟ್ಟಲು ಸಿಫಾರಸ್ಸು ಮಾಡಿ ₹21.75 ಲಕ್ಷ ಹಣವನ್ನು ಶಾಲೆಯ ಎಸ್.ಡಿ.ಎಂ.ಸಿ.ಅಧ್ಯಕ್ಷರ ಖಾತೆಗೆ ಹಣ ಜಮಾಮಾಡಲಾಗಿತ್ತು. ಅವರು ಕಟ್ಟಡ ನಿರ್ಮಾಣ ಕಾರ್ಯಕ್ಕೆ ತಯಾರಿ ನಡೆಸಿದ್ದರು, ಆದರೆ ಕೆಲದಿನಗಳ ನಂತರ ಅನುದಾನವನ್ನು ಸರಕಾರದ ಆದೇಶದಂತೆ ಮರಳಿ ಪಡೆದು PWD ಇಲಾಖೆಗೆ ವರ್ಗಾಯಿಸಿದರು. ಅವರು ಕಾರ್ಯ ಪ್ರಾರಂಭಿಸದೆ ವರ್ಷ ಕಳೆದರೂ ಯಾರೂ ಇತ್ತ ಲಕ್ಷ ಕೊಡುತ್ತಿಲ್ಲ. ಶಿಕ್ಷಣ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಶಾಸಕರ ಇಚ್ಛಾಶಕ್ತಿಯ ಅಭಾವದಿಂದ ಪ್ರಾಥಮಿಕ ಶಾಲೆಗಳ ದುರಸ್ಥಿ ಮತ್ತು ಮರುಜೀವ ತುಂಬುವ ಕಾರ್ಯ ಸಂಪೂರ್ಣ ನೆನೆಗುದಿಗೆ ಬಿದ್ದಿದೆ.
ತಾಲೂಕಿನ ಪೂರ್ವಭಾಗದ ಕಕ್ಕೇರಿ ಶಾಲೆಗೆ ₹22 ಲಕ್ಷ ರೂ., ಗಂದಿಗವಾಡ ₹22ಲಕ್ಷ, ಅಂಗ್ರೊಳ್ಳಿ ₹8 ಲಕ್ಷ, ಘಸ್ಟೊಳ್ಳಿ ಸಮೀಪದ ಶಿವಾಜಿ ನಗರಕ್ಕೆ ₹8 ಲಕ್ಷ ರೂಗಳ ಅನುದಾನ ಮಂಜೂರಾಗಿವೆ, ತಾಲೂಕಿನ ಪಶ್ಚಿಮ ಭಾಗದ ಕೆಲ ಶಾಲೆಗಳಿಗೂ ಅನುದಾನ ಬಿಡುಗಡೆ ಆಗಿದ್ದರೂ ಕಾಮಗಾರಿ ಪ್ರಾರಂಭ ಆಗಿಲ್ಲ. ಸ್ಥಾನಿಕವಾಗಿ ಕಾಮಗಾರಿ ಹಂಚಿಕೊಟ್ಟಿದ್ದರೆ ದ ಬೇಗ ಶಾಲೆಗಳ ಕಟ್ಟಡ ಕಾಮಗಾರಿಗಳು ಇಷ್ಟೊತ್ತಿಗೆ ಮುಕ್ತಾಯ ಹಂತ ತಲುಪುತ್ತಿದ್ದವು ಎಂಬುದು ಜನರ ಅಭಿಪ್ರಾಯವಾಗಿದೆ. ಅದರಂತೆ ಪಶ್ಚಿಮ ಭಾಗದ ಅನೇಕ ಪ್ರಾಥಮಿಕ ಶಾಲೆಗಳ ಸ್ಥಿತಿ ಅಯೋಮಯವಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ, ವಿದ್ಯಾರ್ಥಿ, ಶಿಕ್ಷಕ, ಪಾಲಕರ ಬಾಳು ತ್ರಿಶಂಕು ಸ್ಥಿತಿಯಲ್ಲಿ ನರಳುತ್ತಿವೆ. ಪಾಲಕರು ಮಕ್ಕಳನ್ನು ಬೇರೆ ಶಾಲೆಗಳಿಗೆ ಕಳಿಸುತ್ತಿದ್ದಾರೆ, ಶಿಕ್ಷಕರು ವರ್ಗಾವಣೆಗೆ ಪ್ರಯತ್ನಿಸಿ ಬೇರೆ ಶಾಲೆಗಳನ್ನು ಸೇರುತ್ತಿದ್ದಾರೆ.

ಅದರಂತೆ ಗ್ರಾಮದ ಉರ್ದು ಪ್ರಾಥಮಿಕ ಶಾಲೆಯ ವರ್ಗಕೋಣೆಗಳಲ್ಲಿ ಒಂದು ಕೋಣೆ ಮೇಲ್ಛಾವಣಿಯ ಕಟ್ಟಿಗೆಗೆ ಗೆದ್ದಲು ಹುಳು ಹತ್ತಿ ಎರಡು ವರ್ಷಗಳ ಹಿಂದೆ ಕುಸಿದು ನೆಲಕಚ್ಚಿದೆ. ಇಂದಿನವರೆಗೂ ಆ ಶಾಲಾ ಕೋನೆಗಳ ಮರುನಿರ್ಮಾಣ ಆಗಿಲ್ಲ. ಇದರಿಂದಾಗಿ ಪಾಲಕರು ಮಕ್ಕಳನ್ನು ಶಾಲೆಗೆ ಕಳಿಸಲು ಭಯಪಡುತ್ತಿರುವುದರಿಂದ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆ ಆಗಿ ಶಾಲೆ ಮುಚ್ಚುವ ಹಂತದಲ್ಲಿದೆ. ಮರು ನಿರ್ಮಾಣಕ್ಕೆ ತಕ್ಷಣ ಕ್ರಮ ಕೈಕೊಳ್ಳಬೇಕೆಂದು ಗ್ರಾಮಸ್ಥರ ಬೇಡಿಕೆ ಆಗಿದೆ.

ಆದ್ದರಿಂದ ತಕ್ಷಣವೇ ಖಾನಾಪೂರ ತಾಲೂಕಿನ ಸುಮಾರು 29 ಶಾಲೆಗಳಿಗೆ ಇನ್ನೂ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಿ, ಅತೀ ಶೀಘ್ರವಾಗಿ ನಾ ದುರಸ್ಥ ಶಾಲೆಗಳ ವರ್ಗಕೋಣೆಗಳನ್ನು ನೆಲಸಮಗೊಳಿಸಿ ಹೊಸ ಕೋಣೆಗಳ ಕಟ್ಟಡ ನಿರ್ಮಾಣ ಕಾರ್ಯ ಆಗಬೇಕು, ಸೋರುವ ಕೋಣೆಗಳ ದುರಸ್ಥಿ ಕಾರ್ಯ ಆಗಬೇಕು ಇಲ್ಲವಾದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಶಿಕ್ಷಣ ಪ್ರೇಮಿಗಳು ಪಾಲಕರು ಮತ್ತು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.