ಉತ್ತಮ ಸಮಾಜಕ್ಕಾಗಿ

ಭಾವೈಕ್ಯತಾ ಶಿಬಿರ: ಸಕಲ ಸಿದ್ಧತೆ ಕೈಗೊಳ್ಳಲು ಜಿಲ್ಲಾಧಿಕಾರಿ ಸೂಚನೆ

0

ಬೆಳಗಾವಿ: ನಗರದ ಜೈನ್ ಹೆರಿಟೇಜ್ ಶಾಲೆಯಲ್ಲಿ ಭಾರತ ಸ್ಕೌಟ್ಸ ಮತ್ತೂ ಗೈಡ್ಸ್ ವತಿಯಿಂದ ಜನೇವರಿ 7 ರಿಂದ 11 ರವರೆಗೆ ಆಯೋಜಿಸಿರುವ ರಾಷ್ಟ್ರಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಶಿಬಿರದ ಅಂಗವಾಗಿ ಇಲ್ಲಿನ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಇಂದು ಪೂರ್ವಭಾವಿ ಸಭೆ ಜರುಗಿತು. ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಷ್ಟ್ರಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಶಿಬಿರಕ್ಕಾಗಿ ಸಕಲ ಸಿದ್ಧತೆ ಕೈಗೊಂಡು, ಶಿಬಿರ ಯಶಸ್ವಿಯಾಗುವಂತೆ ನೋಡಿಕೊಳ್ಳಬೇಕೆಂದು ಸೂಚಿಸಿದರು. ಶಿಬಿರದಲ್ಲಿ 20 ರಾಜ್ಯಗಳಿಂದ 400 ಮಕ್ಕಳು ಹಾಗೂ ರಾಜ್ಯದ 20 ಜಿಲ್ಲೆಗಳ 400 ಮಕ್ಕಳು ಮತ್ತು 100 ಶಿಕ್ಷಕ, ಶಿಕ್ಷಕಿಯರು ಸೇರಿದಂತೆ ಒಟ್ಟು 900 ಜನರು ಭಾಗವಹಿಸುತ್ತಿರುವುದರಿಂದ ಅವರ ಭದ್ರತೆಗೆ ಹೆಚ್ಚಿನ ಕಾಳಜಿ ವಹಿಸಬೇಕು. ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಶಾಲೆಯ ಆವರಣ ಹಾಗೂ ವಸತಿ ನಿಲಯದಲ್ಲಿ ಅಗತ್ಯ ಭದ್ರತೆ ಕಲ್ಪಿಸಬೇಕು ಎಂದು ತಿಳಿಸಿದರು.

ವಿಶೇಷ ಸಾರಿಗೆ ವ್ಯವಸ್ಥೆ, ಊಟ ಹಾಗೂ ವಸತಿ ವ್ಯವಸ್ಥೆಯನ್ನು ಯಾವುದೇ ಅಡಚಣೆ ಇಲ್ಲದಂತೆ ಕೈಗೊಳ್ಳಬೇಕು. ಚಳಿ ಹೆಚ್ಚಾಗಿರುವುದರಿಂದ ಮಕ್ಕಳಿಗೆ ವಸತಿ ನಿಲಯಗಳಲ್ಲಿ ಅಗತ್ಯ ಹಾಸಿಗೆ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು. ಪ್ರವಾಸೋದ್ಯಮ ಇಲಾಖೆಯಿಂದ ಮಕ್ಕಳಿಗೆ ರಾಜ್ಯದ ಮಾಹಿತಿ ಪುಸ್ತಕ ಹಾಗೂ ಈ ವರ್ಷದ ಕ್ಯಾಲೆಂಡರ್‍ಗಳನ್ನು ವಿತರಿಸಬೇಕು. ಶಾಲಾ ಆವರಣದ ಸುತ್ತಮುತ್ತ ಸ್ವಚ್ಛತೆ ಕೈಗೊಳ್ಳಬೇಕು. ಫಾಗಿಂಗ್ ಮಾಡಬೇಕು ಹಾಗೂ ಮಕ್ಕಳಿಗೆ 24/7 ವೈದ್ಯಕೀಯ ಸೌಲಭ್ಯ ಒದಗಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್. ಆರ್ ಅವರು ಮಾತನಾಡಿ, ಶಿಬಿರ
ನಡೆಯುವ ಜೈನ್ ಹೆರಿಟೇಜ್ ಶಾಲೆಯ ಆವರಣದಲ್ಲಿ ಸ್ವಚ್ಛತೆ ಕಾಪಾಡಬೇಕು. ಶಿಬಿರದಲ್ಲಿ ಪಾಲ್ಗೊಳ್ಳುವ ಮಕ್ಕಳಿಗೆ ಉತ್ತಮ ಊಟ ಹಾಗೂ ಉಪಹಾರದ ವ್ಯವಸ್ಥೆ ಮಾಡಬೇಕು ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಸೂಚಿಸಿದರು. ಶಿಬಿರದ ಯಶಸ್ವಿಗಾಗಿ ವಿವಿಧ ಸಮಿತಿಗಳನ್ನು ರಚಿಸಿ, ಅವರಿಗೆ ಪ್ರತ್ಯೇಕ ಜವಾಬ್ದಾರಿ ವಹಿಸಬೇಕು. ಯಾವುದೇ ಸಮಸ್ಯೆಯಾಗದಂತೆ ಮುಂಜಾಗೃತಾ ಕ್ರಮವಾಗಿ ಅಗತ್ಯ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ತಿಳಿಸಿದರು.

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‍ನ ಮುಖ್ಯ ಆಯುಕ್ತರಾದ ಶ್ರೀಮತಿ ಪ್ರಭಾವತಿ ಪಾಟೀಲ ಅವರು ಮಾತನಾಡಿ, ಈಗಾಗಲೇ ಶಿಬಿರದ ಯಶಸ್ಸಿಗೆ ಅಗತ್ಯ ಸೌಕರ್ಯಗಳನ್ನು ಕೈಗೊಳ್ಳಲಾಗಿದ್ದು, ಇನ್ನುಳಿದ ಕಾರ್ಯಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.