ಉತ್ತಮ ಸಮಾಜಕ್ಕಾಗಿ

ಸಮಗ್ರ ಅಭಿವೃದ್ಧಿಗೆ ಸರ್ಕಾರದ ಆದ್ಯತೆ- ಸಚಿವ ರಮೇಶ ಜಾರಕಿಹೊಳಿ 9 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ

0

ಬೆಳಗಾವಿ: ಮುಖ್ಯಮಂತ್ರಿಗಳ 100 ಕೋಟಿ ರೂಪಾಯಿ ವಿಶೇಷ ಅನುದಾನದಡಿ ನಗರದ ವಿವಿಧೆಡೆ ಕೈಗೆತ್ತಿಕೊಳ್ಳಲಾಗಿರುವ 9 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ ಜಾರಕಿಹೊಳಿ ಅವರು ಗುರುವಾರ(ಜ.4) ಚಾಲನೆ ನೀಡಿದರು.
ಸಿದ್ದೇಶ್ವರ ನಗರದಲ್ಲಿ ರಸ್ತೆ ಹಾಗೂ ಒಳಚರಂಡಿ ಸುಧಾರಣೆಯ 1.5 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಚಿವರು, ಸರ್ಕಾರವು ಅಭಿವೃದ್ಧಿಗೆ ಆದ್ಯತೆ ನೀಡಿದ್ದು ಮಹಾನಗರ ವ್ಯಾಪ್ತಿಯ ವಿವಿಧ ಕ್ಷೇತ್ರಗಳಲ್ಲಿ ರಸ್ತೆ, ಒಳಚರಂಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.
ಸ್ಥಳೀಯ ಶಾಸಕರು ಕಾಮಗಾರಿ ಉದ್ಘಾಟನಾ ಸಮಾರಂಭಕ್ಕೆ ಗೈರುಹಾಜರಾಗಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಶಿಷ್ಟಾಚಾರ ಪ್ರಕಾರ ಸಂಬಂಧಪಟ್ಟ ಅಧಿಕಾರಿಗಳು ಶಾಸಕರಿಗೆ ಆಹ್ವಾನ ನೀಡಿರುತ್ತಾರೆ.
ಒಂದು ವೇಳೆ ಶಿಷ್ಟಾಚಾರ ಉಲ್ಲಂಘನೆಯಾಗಿದ್ದರೆ ಶಾಸಕರು ಹಕ್ಕುಚ್ಯುತಿ ಮಂಡಿಸಲಿ. ಅದು ಸಾಬೀತಾದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು ಎಂದು ಹೇಳಿದರು.
ಸರ್ಕಾರವು ಪಕ್ಷಾತೀತವಾಗಿ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದೆ. ಸರ್ಕಾರ ಎಂದರೆ ಸರ್ಕಾರ ಮಾತ್ರ; ಅಲ್ಲಿ ಯಾವುದೇ ಪಕ್ಷದ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಫಿರೋಜ್ ಶೇಠ, ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರಾದ ಶಶಿಧರ ಕುರೇರ ಹಾಗೂ ಸ್ಥಳೀಯ ಜನರು ಉಪಸ್ಥಿತರಿದ್ದರು.

9 ಕೋಟಿ ವೆಚ್ಚದ ಕಾಮಗಾರಿ:
2 ಕೋಟಿ ವೆಚ್ಚದ ಬಂಜಾರಾ ಕಾಲನಿ, ಮರಾಠಾ ಕಾಲನಿ,ಚಿಕ್ಕುಬಾಗ, ಆಜಾದ್ ಕಾಲನಿಯ ಆಂತರಿಕ ರಸ್ತೆ ಹಾಗೂ ಚರಂಡಿಗಳ ಸುಧಾರಣೆ; 2 ಕೋಟಿ ವೆಚ್ಚದಲ್ಲಿ ಸಹ್ಯಾದ್ರಿ ನಗರ, ವಿದ್ಯಾನಗರ, ಪೊಲೀಸ್ ಕಾಲನಿ, ಡ್ರೈವರ್ಸ್ ಕಾಲನಿಯ ಆಂತರಿಕ ರಸ್ತೆ ಹಾಗೂ ಚರಂಡಿಗಳ ಸುಧಾರಣೆ; 1.5 ಕೋಟಿ ವೆಚ್ಚದ ಆಶ್ರಯ ಕಾಲನಿ ಸಹ್ಯಾದ್ರಿ ನಗರ, ಸಿದ್ಧೇಶ್ವರ ನಗರ, ಜ್ಯೋತಿ ನಗರದಲ್ಲಿ ಆಂತರಿಕ ರಸ್ತೆ ಕಾಮಗಾರಿ; 1.5 ಕೋಟಿ ವೆಚ್ಚದಲ್ಲಿ ರಾಮನಗರ, ಮಾರ್ಕಂಡೇಯ ನಗರ, ಶಿಂದಿ ಕಾಲನಿ, ಗಣೇಶ ನಗರದಲ್ಲಿ ಆಂತರಿಕ ರಸ್ತೆ ಹಾಗೂ ಒಳಚರಂಡಿ ಸುಧಾರಣೆ ಮತ್ತು 2 ಕೋಟಿ ವೆಚ್ಚದಲ್ಲಿ ಜಯನಗರ, ವಿನಾಯಕ ಕಾಲನಿ, ಓಂಕಾರ ನಗರ, ಇರಿಗೇಶನ್ ಕಾಲನಿಯ ಆಂತರಿಕ ರಸ್ತೆ ಮತ್ತು ಒಳಚರಂಡಿ ಸುಧಾರಣೆ ಕಾಮಗಾರಿಗಳಿಗೆ ಸಚಿವರು ಚಾಲನೆ ನೀಡಿದರು.

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: