ಉತ್ತಮ ಸಮಾಜಕ್ಕಾಗಿ

ಶಿವಯೋಗಿ ಸಿದ್ಧರಾಮ-ಮಹಾಯೋಗಿ ವೇಮನ-ಅಂಬಿಗರ ಚೌಡಯ್ಯ ಜಯಂತಿ ಪೂರ್ವಭಾವಿ ಸಭೆ

0

ಬೆಳಗಾವಿ: ಜನೇವರಿ.15 ರಂದು ಜರಗುವ ಶಿವಯೋಗಿ ಶ್ರೀ ಸಿದ್ಧರಾಮ ಜಯಂತಿ, ಜನೇವರಿ.19 ರಂದು ಆಚರಿಸುವ ಮಹಾಯೋಗಿ ವೇಮನರ ಜಯಂತಿ ಹಾಗೂ ಜನೇವರಿ 21 ರಂದು ನಡೆಯುವ ಶಿವಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ ಅಂಗವಾಗಿ ಇಲ್ಲಿನ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಮಂಗಳವಾರ (ಜ.5) ಪೂರ್ವಭಾವಿ ಸಭೆ ಜರುಗಿತು.
ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿವಯೋಗಿ ಶ್ರೀ ಸಿದ್ಧರಾಮ, ಮಹಾಯೋಗಿ ವೇಮನ ಹಾಗೂ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸುವ ನಿಟ್ಟಿನಲ್ಲಿ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲು ಸೂಚಿಸಿದರು.
ಜನೇವರಿ 15 ರಂದು ಶಿವಯೋಗಿ ಶ್ರೀ ಸಿದ್ಧರಾಮ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸುವ ನಿಟ್ಟಿನಲ್ಲಿ ಎಲ್ಲ ಅಗತ್ಯ ತಯಾರಿಯನ್ನು ಕೈಗೊಳ್ಳಬೇಕು. ಕಾರ್ಯಕ್ರಮದ ಯಶಸ್ಸಿಗೆ ಎಲ್ಲ ಇಲಾಖೆಯ ಅಧಿಕಾರಿಗಳು, ಸಮಾಜ ಹಾಗೂ ಸಂಘಟನೆಗಳ ಮುಖಂಡರು ಕೈಜೋಡಿಸಬೇಕೆಂದು ಹೇಳಿದರು.
ಮಹಾಯೋಗಿ ವೇಮನ ಜಯಂತಿ:
ಮಹಾಯೋಗಿ ವೇಮನರ ಜಯಂತಿ ಅಂಗವಾಗಿ ಜನೇವರಿ 19 ರಂದು ಸಂಜೆ 4 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ಮೆರವಣಿಗೆಗೆ ಚಾಲನೆ ನೀಡಲಾಗುವುದು. ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕುಮಾರಗಂಧರ್ವ ರಂಗಮಂದಿರ ತಲುಪಲಿದೆ. ಮೆರವಣಿಗೆಯಲ್ಲಿ 5 ಕಲಾತಂಡಗಳು ಪಾಲ್ಗೊಳ್ಳಲಿವೆ ಎಂದು ತಿಳಿಸಿದರು.
ನಂತರ ಕುಮಾರ ಗಂಧರ್ವ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮಕ್ಕೆ ಶಿಷ್ಟಾಚಾರದ ಪ್ರಕಾರ ಅತಿಥಿಗಳನ್ನು ಹಾಗೂ ಗಣ್ಯರನ್ನು ಆಹ್ವಾನಿಸಬೇಕು. ಉಪನ್ಯಾಸ ನೀಡಲು ಸಂಪನ್ಮೂಲ ವ್ಯಕ್ತಿಯೊಬ್ಬರಿಗೆ ಆಹ್ವಾನ ನೀಡಬೇಕು ಎಂದು ಹೇಳಿದರು.
ಮೆರವಣಿಗೆಗೆ ಅಗತ್ಯ ಭದ್ರತೆ ಒದಗಿಸಬೇಕು. ಕುಮಾರ ಗಂಧರ್ವ ರಂಗಮಂದಿರದ ಸುತ್ತಮುತ್ತ ಸ್ವಚ್ಛತೆ ಕೈಗೊಳ್ಳಬೇಕು. ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಇನ್ನಿತರ ಅಗತ್ಯ ವ್ಯವಸ್ಥೆಯನ್ನು ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಶಿವಶರಣ ಅಂಬಿಗರ ಚೌಡಯ್ಯ ಜಯಂತಿ:
ಜನೇವರಿ 21 ರಂದು ಜರುಗುವ ಅಂಬಿಗರ ಚೌಡಯ್ಯನವರ ಜಯಂತಿ ನಿಮಿತ್ಯ ಬೆಳಿಗ್ಗೆ 9:30ಕ್ಕೆ ನಗರದ ಕೋಟೆ ಕೆರೆಯಿಂದ ಮೆರವಣಿಗೆಗೆ ಚಾಲನೆ ನೀಡಲಾಗುವುದು. ಮೆರವಣಿಗೆಯು ಆರ್.ಟಿ.ಒ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಎಸ್‍ಪಿ ಕಚೇರಿ ಮಾರ್ಗವಾಗಿ ಕುಮಾರ ಗಂಧರ್ವ ರಂಗಮಂದಿರ ತಲುಪಲಿದೆ. ಮೆರವಣಿಗೆಯಲ್ಲಿ 2 ಕಲಾತಂಡಗಳು ಹಾಗೂ ನೂರಾರು ಜನರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ನಂತರ ಕುಮಾರಗಂಧರ್ವ ರಂಗಮಂದಿರಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕಾಗಿ ರಂಗಮಂದಿರದಲ್ಲಿ ಎಲ್ಲ ರೀತಿಯ ಸೌಲಭ್ಯಗಳನ್ನು ಕೈಗೊಳ್ಳಬೇಕು. ಯಾವುದೇ ರೀತಿಯಲ್ಲಿ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಅಂಬಿಗರ ಚೌಡಯ್ಯನವರ ಜಯಂತಿಯನ್ನು ಕೇವಲ ಒಂದು ಸಮಾಜಕ್ಕೆ ಸೀಮಿತಗೊಳಿಸಬಾರದು. ಎಲ್ಲ ಸಮಾಜದ ಮುಖಂಡರಿಗೂ ಜಯಂತಿಗೆ ಆಗಮಿಸಲು ಜಿಲ್ಲಾಡಳಿತದಿಂದ ಆಹ್ವಾನವನ್ನು ನೀಡಬೇಕು. ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರಗಳಲ್ಲಿ ಒಂದೇ ದಿನ ಜಯಂತಿಯನ್ನು ಆಚರಿಸುವುದರಿಂದ, ಸಮಾಜದ ಎಲ್ಲ ಜನರಿಗೂ ಜಯಂತಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಬೇರೆ ಬೇರೆ ದಿನ ಜಯಂತಿಯನ್ನು ಆಚರಿಸಬೇಕೆಂದು ಗಂಗಾಮತ ಹಾಗೂ ಅಂಬಿಗರ ಸಮಾಜದ ಮುಖಂಡರು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಈ ಬಗ್ಗೆ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರು ಭರವಸೆ ನೀಡಿದರು.
ಉಪವಿಭಾಗಾಧಿಕಾರಿ ಕವಿತಾ ಯೋಗಪ್ಪನವರ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಶೈಲ ಕರಿಶಂಕರಿ, ತಹಶೀಲ್ದಾರ ಮಂಜುಳಾ ನಾಯಕ, ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿ ಎಸ್.ಯು. ಜಮಾದಾರ ಸೇರಿದಂತೆ ಮಹಾನಗರ ಪಾಲಿಕೆ, ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಇನ್ನಿತರ ಇಲಾಖೆಗಳ ಅಧಿಕಾರಿಗಳು, ವಿವಿಧ ಸಂಘಟನೆ, ಸಮಾಜದ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.