ಉತ್ತಮ ಸಮಾಜಕ್ಕಾಗಿ

ಜ.9 ರಂದು ಲ್ಯಾಪ್‍ಟಾಪ್ ವಿತರಣಾ ಸಮಾರಂಭ

0

ಜಿಲ್ಲೆಯ 682 ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಣೆ:
– ವೈ.ಎನ್. ದೊಡ್ಡಮನಿ
ಬೆಳಗಾವಿ: ಜಿಲ್ಲಾ ವ್ಯಾಪ್ತಿಯಲ್ಲಿನ ಸರ್ಕಾರಿ ಪ್ರಥಮ ದರ್ಜೆ ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಒಟ್ಟು 682 ವಿದ್ಯಾರ್ಥಿಗಳಿಗೆ ಜನೇವರಿ 9 ರಂದು ಲ್ಯಾಪ್‍ಟಾಪ್ ವಿತರಣೆ ಮಾಡಲಾಗುವುದು ಎಂದು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ವೈ.ಎನ್. ದೊಡ್ಡಮನಿ ಅವರು ತಿಳಿಸಿದರು.
ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ 21 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ 499 ವಿದ್ಯಾರ್ಥಿಗಳು ಹಾಗೂ ಎರಡು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳ 183 ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಉಚಿತವಾಗಿ ಲ್ಯಾಪ್‍ಟಾಪ್ ವಿತರಿಸಲಾಗುವುದು ಎಂದು ಹೇಳಿದರು.
ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಏಸರ್ ಕಂಪನಿಯ ಗುಣಮಟ್ಟದ ಲ್ಯಾಪ್‍ಟಾಪ್‍ಗಳನ್ನು ನೀಡಲಾಗುತ್ತಿದೆ. ಲ್ಯಾಪ್‍ಟಾಪ್‍ಗಳಿಗೆ ವಿವಿಧ ಸಾಪ್ಟ್‍ವೇರ್‍ಗಳನ್ನು ಅಳವಡಿಸಿ ಕೊಡಲಾಗುವುದು ಎಂದು ತಿಳಿಸಿದರು.
ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಕಾಲೇಜು ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಜನೇವರಿ 9 ರಂದು ಮಧ್ಯಾಹ್ನ 1 ಗಂಟೆಗೆ ಲ್ಯಾಪ್‍ಟಾಪ್ ವಿತರಣಾ ಸಮಾರಂಭ ನಡೆಯಲಿದೆ.
ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ ಜಾರಕಿಹೊಳಿ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ಫಿರೋಜ್ ಶೇಠ ಅವರು ಅಧ್ಯಕ್ಷತೆ ವಹಿಸುವರು. ಉನ್ನತ ಶಿಕ್ಷಣ ಸಚಿವರಾದ ಬಸವರಾಜ ರಾಯರಡ್ಡಿ ಅವರು ಲ್ಯಾಪ್‍ಟಾಪ್ ವಿತರಣೆ ಮಾಡುವರು.
ಕೇಂದ್ರದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವರಾದ ಅನಂತಕುಮಾರ ಹೆಗಡೆ, ಸರ್ಕಾರದ ಮುಖ್ಯ ಸಚೇತಕರಾದ ಅಶೋಕ ಪಟ್ಟಣ, ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿಗಳು ಹಾಗೂ ಶಾಸಕರಾದ ಗಣೇಶ ಹುಕ್ಕೇರಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಜಿಲ್ಲೆಯ ಎಲ್ಲ ಸಂಸತ್ ಸದಸ್ಯರು, ಶಾಸಕರು, ವಿಧಾನ ಪರಿಷತ ಸದಸ್ಯರು, ಮಹಾನಗರ ಪಾಲಿಕೆಯ ಮಹಾಪೌರರು, ಜಿಲ್ಲಾ ಪಂಚಾಯತ ಅಧ್ಯಕ್ಷರು ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಇನ್ನಿತರರು ಭಾಗವಹಿಸುವರು ಎಂದು ಅವರು ತಿಳಿಸಿದರು.
ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ|| ಸಿ.ಈಶ್ವರಚಂದ್ರ, ಖಾನಾಪೂರದ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ|| ಡಿ.ಎಂ. ಜವಳಿಕರ, ಕೆ.ಕೆ. ಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ|| ಎಂ.ಎಸ್. ಮಾಳಗಿ, ಪಿ.ಎ. ಘಂಟಿ, ವಿ.ಬಿ. ನಾಯಕ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.