ಉತ್ತಮ ಸಮಾಜಕ್ಕಾಗಿ

ರಾಷ್ಟ್ರಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಶಿಬಿರಕ್ಕೆ ಚಾಲನೆ ಉತ್ತಮ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಿ – ಶಶಿಧರ ಕುರೇರ

0

ಬೆಳಗಾವಿ: ಪ್ರತಿಯೊಂದು ಮಗುವೂ ಅದ್ಭುತ ಶಕ್ತಿಯನ್ನು ಹೊಂದಿರುತ್ತದೆ. ಉನ್ನತ ಸಾಧನೆಗೈಯ್ಯವ ನಿಟ್ಟಿನಲ್ಲಿ ಅಗತ್ಯವಾದ ಅರ್ಹತೆ ಹಾಗೂ ಉತ್ತಮ ಮೌಲ್ಯಗಳನ್ನು ಮೈಗೂಡಿಸಿಕೊಂಡು ಮುನ್ನುಗ್ಗಬೇಕು ಎಂದು ಮಹಾನಗರ ಪಾಲಿಕೆಯ ಆಯುಕ್ತರಾದ ಶಶಿಧರ ಕುರೇರ ಅವರು ಹೇಳಿದರು.
ನಗರದ ಟಿಳಕವಾಡಿಯ ಚನ್ಮಮ್ಮ ನಗರದಲ್ಲಿರುವ ಜೈನ್ ಹೆರಿಟೇಜ್ ಶಾಲೆಯ ಆವರಣದಲ್ಲಿ ರವಿವಾರ (ಜ.7) ಭಾರತ ಸ್ಕೌಟ್ ಮತ್ತು ಗೈಡ್ಸ್ ವತಿಯಿಂದ ಆಯೋಜಿಸಿದ್ದ ರಾಷ್ಟ್ರಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಲಿಕೆ ನಿರಂತರವಾದುದಾಗಿದ್ದು, ನಾವು ಒಳ್ಳೆಯದನ್ನು ಸದಾ ಸ್ವೀಕರಿಸಬೇಕು. ಸಾಧಕರ ಜೀವನ ಚರಿತ್ರೆಯನ್ನು ತಿಳಿದುಕೊಳ್ಳಬೇಕು. ಹಿಡಿದ ಕಾರ್ಯವನ್ನು ಸಾಧಿಸಲು ಶಕ್ತಿಗೂ ಮೀರಿ ಪ್ರಯತ್ನ ನಡೆಸಬೇಕು ಎಂದರು.
ಮಾನವ ಧರ್ಮ ಶ್ರೇಷ್ಠವಾದುದಾಗಿದೆ. ಎಲ್ಲರೂ ಒಂದೇ ಎಂಬ ಭಾವನೆ ನಮ್ಮಲ್ಲಿ ಸದಾ ಇರಬೇಕು. ದೇಶ, ರಾಜ್ಯ ಹಾಗೂ ನಾವಿರುವ ಪ್ರದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರೂ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಸ್ಕೌಟ್ಸ್ ಮತ್ತು ಗೈಡ್ಸ್‍ನಿಂದ ಮಕ್ಕಳು ಶಿಸ್ತು ಹಾಗೂ ಸಂಯಮವನ್ನು ಕಲಿಯುತ್ತಾರೆ. ವ್ಯಕ್ತಿತ್ವದ ಬೆಳವಣಿಗೆಗೂ ಇದು ಸಹಕಾರಿಯಾಗಿದೆ. ಮಕ್ಕಳು ಗೆದ್ದಾಗ ಹಿಗ್ಗದೇ, ಸೊತಾಗ ಕುಗ್ಗದೇ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು. ಶಾಲಾ ದಿನಗಳಲ್ಲಿ ತಾನು ಕೂಡ ಸ್ಕೌಟ್ಸ್ ಮತ್ತು ಗೈಡ್ಸ್‍ನಲ್ಲಿ ತೊಡಗಿಸಿಕೊಂಡಿದ್ದೆ ಎಂದು ನೆನಪಿಸಿಕೊಂಡರು.
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‍ನ ಮುಖ್ಯ ಆಯುಕ್ತರಾದ ಪಿ.ಜಿ. ಆರ್ ಸಿಂದ್ಯಾ ಅವರು ಮಾತನಾಡಿ, ರಾಜ್ಯ ಸರ್ಕಾರ ಸ್ಕೌಟ್ಸ್ ಮತ್ತು ಗೈಡ್ಸ್‍ನ ಕಾರ್ಯಚಟುವಟಿಕೆಗಳಿಗೆ ಎಲ್ಲ ರೀತಿಯ ಸಹಕಾರ ನೀಡುತ್ತಿದೆ. ಸರ್ಕಾರದ ಕರ್ನಾಟಕ ದರ್ಶನ ಕಾರ್ಯಕ್ರಮದಿಂದ ಸ್ಕೌಟ್ಸ್ ಮತ್ತು ಗೈಡ್ಸ್‍ನ ವಿದ್ಯಾರ್ಥಿಗಳು ರಾಜ್ಯದ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಅನುಕೂಲವಾಗಿದೆ ಎಂದು ತಿಳಿಸಿದರು.
ಸ್ಕೌಟ್ಸ್ ಮತ್ತು ಗೈಡ್ಸ್‍ನಲ್ಲಿ ರಾಜಕೀಯ ನಾಯಕರು, ನಿವೃತ್ತ ಅಧಿಕಾರಿಗಳು, ಹಿರಿಯ ನಾಗರಿಕರು ಕೂಡ ತೊಡಗಿಸಿಕೊಂಡಿದ್ದು, ಇವರೆಲ್ಲರೊಂದಿಗೆ ಇದನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಪ್ರಪಂಚದಲ್ಲಿಯೇ ಭಾರತ ಶ್ರೇಷ್ಠ ರಾಷ್ಟ್ರವಾಗಿದ್ದು, ದೇಶದ ಪ್ರತಿಯೊಂದು ರಾಜ್ಯಗಳು ವಿಶೇಷತೆಯನ್ನು ಹೊಂದಿವೆ. ನಾವೆಲ್ಲರೂ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ್ದೇವೆ. ದೇಶದ ವಿವಿಧ ರಾಜ್ಯಗಳ ವಿದ್ಯಾರ್ಥಿಗಳೊಂದಿಗೆ ಇಂದು ರಾಷ್ಟ್ರಮಟ್ಟದ ಭಾವೈಕ್ಯತಾ ದಿನವನ್ನು ಆಚರಿಸುತ್ತಿರುವುದು ಸೌಭಾಗ್ಯ ಎಂದು ಹೇಳಿದರು.
ಗೈಡ್ಸ್‍ನ ಉಪನಿರ್ದೇಶಕರಾದ ಸ್ರೀಮತಿ ಸುರೇಖಾ ಶ್ರೀವಾಸ್ತವ ಅವರು ಮಾತನಾಡಿ, ದೇಶದಲ್ಲಿ ಸ್ಕೌಟ್ಸ್, ಗೈಡ್ಸ್‍ನ ಶಿಬಿರಗಳು ಎಲ್ಲಿಯೇ ನಡೆದರೂ ಅಲ್ಲಿ ಕರ್ನಾಟಕದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುತ್ತಾರೆ. ಕರ್ನಾಟಕ ಈ ಶಿಬಿರವನ್ನು ಸಮರ್ಥವಾಗಿ ನಿರ್ವಹಿಸುತ್ತದೆ ಎಂಬ ನಂಬಿಕೆಯಿಂದಲೇ ಇಂದು ರಾಜ್ಯಕ್ಕೆ ಈ ಶಿಬಿರವನ್ನು ಆಯೋಜಿಸುವ ಅವಕಾಶ ಒದಗಿ ಬಂದಿದೆ ಎಂದು ತಿಳಿಸಿದರು.
ಪ್ರೊ. ಆರ್.ಜಿ. ಧಾರವಾಡಕರ ಅವರು ಮಾತನಾಡಿ, ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.
ಗೈಡ್ಸ್‍ನ ರಾಜ್ಯ ಸಂಘಟನಾ ಆಯುಕ್ತರಾದ ಸಿ. ಮಂಜುಳಾ, ಜೈನ್ ಹೆರಿಟೇಜ್ ಶಾಲೆಯ ಶ್ರದ್ಧಾ ಕಟವಟೆ, ಪ್ರಾಚಾರ್ಯರಾದ ಮಂದೀಪ ಜೈನ್, ಗೀತಾ ನಟರಾಜನ್, ಎಂ.ಎ. ಚಲ್ಲಯ್ಯ, ಅರುಣಚಂದ್ರ ಪತ್ತಾರ, ಸಂಯೋಜಕಿ ಪಲ್ಲವಿ ನಾಡಕರ್ಣಿ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕರ್ನಾಟಕ, ತಮಿಳುನಾಡು, ಆಂದ್ರಪ್ರದೇಶ, ಜಾರ್ಖಂಡ, ಕೇರಳ ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ ಸೇರಿದಂತೆ 14 ರಾಜ್ಯಗಳ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಮಾರ್ಗದರ್ಶಕರು, ಪಾಲಕರು, ಇನ್ನಿತರರು ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಜೈನ್ ಹೆರಿಟೇಜ್ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥನಾ ಗೀತೆ ಹಾಡಿದರು. ಸ್ಕೌಟ್ಸ್ ಮತ್ತು ಗೈಡ್ಸ್‍ನ ಜಿಲ್ಲಾ ಮುಖ್ಯ ಆಯುಕ್ತರಾದ ಗಜಾನಂದ ಮನ್ನಿಕೇರಿ ಅವರು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸ್ಕೌಟ್ಸ್ ಮತ್ತು ಗೈಡ್ಸ್‍ನ ಆಯುಕ್ತರಾದ ಶ್ರೀಮತಿ ಪ್ರಭಾವತಿ ಪಾಟೀಲ ಅವರು ನಿರೂಪಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.