ಉತ್ತಮ ಸಮಾಜಕ್ಕಾಗಿ

ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆ ಅನಗೋಳ ಕೆರೆ ಸೇತುವೆ ನಿರ್ಮಾಣದ ಭರವಸೆ

0

(TarunKranti)ಬೆಳಗಾವಿ ನಗರದ ಅನಗೋಳ ಕೆರೆಯ ಮಧ್ಯದಲ್ಲಿ ಇರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಇರುವ ಸ್ಥಳಕ್ಕೆ ಅಂದಾಜು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಲು ಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುದಾನ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ ಭರವಸೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ(ಜ.8) ನಡೆದ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ಹಿಂದಿನ್ನ ಸಂಚಿಕೆಯಲ್ಲಿ ಎಸ್‍ಸಿಪಿ-ಟಿಎಸ್‍ಪಿ ಪ್ರಗತಿ ಪರಿಶೀಲನೆ ನೂರರಷ್ಟು ಸಾಧನೆಗೆ ಜಿಲ್ಲಾಧಿಕಾರಿ ಸೂಚನೆ ತಪ್ಪದೆ ಓದಿ

ಪ್ರತಿ ಸಭೆಯಲ್ಲೂ ಈ ವಿಷಯ ಚರ್ಚೆ ಆಗುತ್ತಿದ್ದರೂ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಆಗುತ್ತಿಲ್ಲ. ಆದ್ದರಿಂದ ಈ ವಿಷಯವನ್ನು ಬಗೆಹರಿಸಲೇಬೇಕು ಎಂದು ಒಕ್ಕೊರಲಿನಿಂದ ಒತ್ತಾಯಿಸಿದರು.
ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಪಾಲಿಕೆ ಹಾಗೂ ಪ್ರಾಧಿಕಾರದ ಅನುದಾನದಿಂದ ಸೇತುವೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು ಎಂದರು.
ಸ್ಮಶಾನ ಭೂಮಿ ತಕ್ಷಣ ಮಂಜೂರಾತಿ:
ಬೆಳಗಾವಿ ತಾಲ್ಲೂಕಿನ ಬಸವನ ಕುಡಚಿ, ಅನಗೋಳ, ಅಥಣಿ ತಾಲ್ಲೂಕಿನ ಬಡಾಲ ಅಂಕಲಿ ಹಾಗೂ ರಾಯಬಾಗ ತಾಲ್ಲೂಕಿನ ಖಣದಾಳ ಗ್ರಾಮದ ದಲಿತರಿಗೆ ಸ್ಮಶಾನಭೂಮಿ ಮಂಜೂರು ಮಾಡಬೇಕು ಎಂಬ ಬೇಡಿಕೆಯ ಬಗ್ಗೆ ಚರ್ಚೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರು, ಸ್ಮಶಾನ ಭೂಮಿ ಮಂಜೂರಾತಿಗಾಗಿ ವಿಶೇಷ ಅಭಿಯಾನ ಹಮ್ಮಿಕೊಂಡಿದ್ದು, ಜಿಲ್ಲೆಯಲ್ಲಿ ಈಗಾಗಲೇ 18 ಗ್ರಾಮಗಳಿಗೆ ಸ್ಮಶಾನ ಭೂಮಿ ಮಂಜೂರು ಮಾಡಲಾಗಿದೆ.
ಅದೇ ರೀತಿ ಯಾವುದೇ ಗ್ರಾಮದಿಂದ ಸ್ಮಶಾನ ಬೂಮಿಗೆ ಬೇಡಿಕೆ ಬಂದರೆ ಸರ್ಕಾರಿ ಜಮೀನು ಇದ್ದರೆ ತಕ್ಷಣವೇ ಮಂಜೂರು ಮಾಡಲಾಗುವುದು. ಒಂದು ವೇಳೆ ಸರ್ಕಾರಿ ಜಮೀನು ಇಲ್ಲದಿದ್ದರೆ ಖಾಸಗಿ ಜಮೀನು ಖರೀದಿಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ತಹಶೀಲ್ದಾರರಿಗೆ ಸೂಚನೆ ನೀಡಿದರು.

ಜಾತಿಪ್ರಮಾಣ ಪತ್ರ-ಆನ್‍ಲೈನ್ ಅರ್ಜಿಗೆ ಸೂಚನೆ:
ದಲಿತರ ಮೇಲಾಗುವ ದೌರ್ಜನ್ಯ ಪ್ರಕರಣಗಳ ತನಿಖೆ ಹಾಗೂ ಪರಿಹಾರ ವಿತರಣೆಗೆ ಅನುಕೂಲವಾಗಬೇಕಾದರೆ ಜಾತಿ ಪ್ರಮಾಣಪತ್ರ ಅಗತ್ಯವಿರುತ್ತದೆ. ಪ್ರಮಾಣಪತ್ರ ಪಡೆಯುವಲ್ಲಿ ಆಗುತ್ತಿರುವ ವಿಳಂಬವನ್ನು ತಡೆಗಟ್ಟಲು ಜಾತಿಪ್ರಮಾಣ ಪತ್ರಕ್ಕೆ ಆನ್‍ಲೈನ್ ಅರ್ಜಿ ಸಲ್ಲಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಹೇಳಿದರು.
ಕಳೆದ ಮೂರು ತಿಂಗಳಲ್ಲಿ ಪೊಲೀಸ್ 24 ದೌರ್ಜನ್ಯ ಪ್ರಕರಣಗಳ ದಾಖಲಾಗಿದ್ದು, 10 ಪ್ರಕರಣಗಳ ವಿಚಾರಣೆ ಬಾಕಿ ಇದೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವೀಂದ್ರ ಗಡಾದಿ ಸಭೆಗೆ ತಿಳಿಸಿದರು.
ಅದೇ ರೀತಿ ಬೆಳಗಾವಿ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ 11 ಪ್ರಕರಣ ದಾಖಲಾಗಿದ್ದು, ಹದಿನೈದು ದಿನಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ಉಪ ಪೊಲೀಸ್ ಆಯುಕ್ತ ಅಮರನಾಥ ರೆಡ್ಡಿ ತಿಳಿಸಿದರು.
ಪಠ್ಯಪುಸ್ತಕ ವಿತರಿಸಲು ಸೂಚನೆ:
ಪಠ್ಯಪುಸ್ತಕ ಪೂರೈಕೆ ವಿಳಂಬವಾಗಿದ್ದರಿಂದ ಕೆಲವು ಶಾಲೆಗಳಲ್ಲಿ ತಾತ್ಕಾಲಿಕವಾಗಿ ಪಠ್ಯಪುಸ್ತಕಗಳ ಝರಾಕ್ಸ್ ಪ್ರತಿ ವಿತರಿಸಲಾಗಿತ್ತು ಎಂಬ ಮಾಹಿತಿ ಇದೆ. ಹೊಸ ಪಠ್ಯಪುಸ್ತಕ ಬಂದರೆ ತಕ್ಷಣವೇ ಎಲ್ಲ ವಿದ್ಯಾರ್ಥಿಗಳಿಗೂ ಅವುಗಳನ್ನು ತಲುಪಿಸಬೇಕು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್ ಅವರು ಸೂಚನೆ ನೀಡಿದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಕಳೆದ ಏಳು ವರ್ಷಗಳಿಂದ ಹಾಸಿಗೆ(ಬೆಡ್) ನೀಡಿಲ್ಲ ಎಂದು ಸಮಿತಿಯ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ಜಿಯಾವುಲ್ಲಾ ಅವರು, ತಕ್ಷಣವೇ ಎಲ್ಲ ಶಾಲೆಗಳಿಂದ ಮಾಹಿತಿ ತರಿಸಿಕೊಂಡು ಎಲ್ಲಿ ಮೂರು ವರ್ಷಗಳಿಗಿಂತ ಹಳೆಯ ಬೆಡ್‍ಗಳಿವೆ ಅವುಗಳನ್ನು ಬದಲಾಯಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಬೆಳಗಾವಿ ಮಹಾನಗರ ಪೊಲೀಸ್ ಆಯುಕ್ತರಾದ ಡಾ.ಡಿ.ಸಿ.ರಾಜಪ್ಪ, ಮಹಾನಗರ ಪಾಲಿಕೆ ಆಯುಕ್ತ ಶಶಿಧರ ಕುರೇರ್, ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಎಸ್ಪಿ ಎಸ್.ಟಿ.ಪಗಡಣ್ಣವರ, ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಮುನಿರಾಜು ಅವರು ಸಭೆಯನ್ನು ನಿರ್ವಹಿಸಿದರು.
ಜಿಲ್ಲಾ ಜಾಗೃತ ಸಮಿತಿಯ ಸದಸ್ಯರಾದ ಮಲ್ಲೇಶಿ ಚೌಗಲೆ ಸೇರಿದಂತೆ ಇತರೆ ಸದಸ್ಯರು ಹಾಗೂ ಎಲ್ಲ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

Tarunkranti – Latest news in belgaum – Belgaum Kannada News – Online Belgaum News

ಕ್ರೈಮ್ ಸುದ್ದಿಗಳು   – ಸಿನೆಮಾ

Leave A Reply

 Click this button or press Ctrl+G to toggle between Kannada and English

Your email address will not be published.