ಉತ್ತಮ ಸಮಾಜಕ್ಕಾಗಿ

ಯಡಿಯೂರಪ್ಪ ಮನೆ ಮುತ್ತಿಗೆಗೆ ಯತ್ನ

0

ಬೆಂಗಳೂರು: ‘ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಸಾಲ ಮನ್ನಾ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು’ ಎಂದು ಒತ್ತಾಯಿಸಿ ‘ರಾಜ್ಯ ಯುವ ಕಾಂಗ್ರೆಸ್‌’ ಕಾರ್ಯಕರ್ತರು, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಮನೆಗೆ ಶನಿವಾರ ಮುತ್ತಿಗೆ ಹಾಕಲು ಯತ್ನಿಸಿದರು.

ಮೆರವಣಿಗೆ ಮೂಲಕ ಡಾಲರ್ಸ್‌ ಕಾಲೊನಿಯಲ್ಲಿರುವ ನಿವಾಸಕ್ಕೆ ಬಂದ ಪ್ರತಿಭಟನಾಕಾರರನ್ನು 300 ಮೀಟರ್‌ ಅಂತರದಲ್ಲೇ ಪೊಲೀಸರು ತಡೆದು ನಿಲ್ಲಿಸಿದರು.

ಈ ವೇಳೆ ಪ್ರತಿಭಟನಾನಿರತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಕಾರ್ಯಕರ್ತರು, ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು.

ಯುವ ಕಾಂಗ್ರೆಸ್‌ ರಾಜ್ಯ ಘಟಕದ ಉಪಾಧ್ಯಕ್ಷ ಕೆಂಪರಾಜು ಮಾತನಾಡಿ, ‘ರಾಜ್ಯ ಸರ್ಕಾರವು ರೈತರ ಸಾಲ ಮಾಡಿದೆ. ಆದರೆ, ಕೇಂದ್ರ ಸರ್ಕಾರವು ಯಾವುದೇ ಸಾಲ ಮನ್ನಾ ಮಾಡದೆ ರೈತ ವಿರೋಧಿ ನೀತಿ ಅನುಸರಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಘಟಕದ ಪ್ರಧಾನಕಾರ್ಯದರ್ಶಿ ಶಂಕರ್‌ ಗೌಡ ಮಾತನಾಡಿ, ‘ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಂಡವಾಳಶಾಹಿಗಳ ಪರ ಆಡಳಿತ ನಡೆಸುತ್ತಿದ್ದು, ರೈತರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ’ ಎಂದರು.

‘ರಾಜ್ಯದ ಬಿಜೆಪಿ ಎಲ್ಲ ಸಂಸದರು ಹಾಗೂ ಶಾಸಕರು, ಮೋದಿ ಬಳಿ ಹೋಗಿ ಸಾಲ ಮನ್ನಾ ಮಾಡುವಂತೆ ಒತ್ತಡ ಹೇರಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಸಂಸದರು, ಶಾಸಕರ ಮನೆಗೂ ಮುತ್ತಿಗೆ ಹಾಕುತ್ತೇವೆ’ ಎಂದು  ಅವರು ಎಚ್ಚರಿಸಿದರು.

ದೂರು ದಾಖಲು
ಬೆಂಗಳೂರು:
  ‘ಮಂಗಳೂರು ಗಲಭೆ ವಿಷಯದಲ್ಲಿ ಯಡಿಯೂರಪ್ಪ ಅವರು ಪ್ರಚೋದನಾಕಾರಿ ಹೇಳಿಕೆ ನೀಡಿದ್ದು, ಅವರ ವಿರುದ್ಧ  ಸೂಕ್ತ ಕ್ರಮ ಜರುಗಿಸಬೇಕು’ ಎಂದು ಆರ್‌ಟಿಐ ಕಾರ್ಯಕರ್ತ ಎನ್.ಹನುಮೇಗೌಡ ಎಂಬುವರು ವಿಧಾನಸೌಧ ಠಾಣೆಗೆ ಶನಿವಾರ ದೂರು ಕೊಟ್ಟಿದ್ದಾರೆ.

‘ಆರ್‌ಎಸ್‌ಎಸ್‌ ಮುಖಂಡ ಕಲ್ಕಡ ಪ್ರಭಾಕರ್ ಭಟ್ ಅವರನ್ನು ಪೊಲೀಸರು ಬಂಧಿಸಿದರೆ ರಾಜ್ಯವೇ ಹೊತ್ತಿ ಉರಿಯುತ್ತದೆ ಎಂದು ಯಡಿಯೂರಪ್ಪ ಹೇಳಿಕೆ ಕೊಟ್ಟಿದ್ದಾರೆ. ಗಲಭೆ ಕೋಮು ಸಂಘರ್ಷಕ್ಕೆ ತಿರುಗಿರುವ ಇಂಥ ಸಂದರ್ಭದಲ್ಲಿ ಈ ರೀತಿ ಹೇಳಿಕೆ ನೀಡಿರುವುದು ಸರಿಯಲ್ಲ’ ಎಂದಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.