ಉತ್ತಮ ಸಮಾಜಕ್ಕಾಗಿ

ಸಮಾಜಕ್ಕೆ ವಿಶ್ವಕರ್ಮ ಸಮುದಾಯದವರ ಕೊಡುಗೆ ಅಪಾರ: ಸಂಸದ ಸುರೇಶ ಅಂಗಡಿ

news tarun kranti

0

ಸಮಾಜಕ್ಕೆ ವಿಶ್ವಕರ್ಮ ಸಮುದಾಯದವರ ಕೊಡುಗೆ ಅಪಾರ: ಸಂಸದ ಸುರೇಶ ಅಂಗಡಿ

ಬೆಳಗಾವಿ: ಕೃಷಿ, ಕೈಗಾರಿಕೆ ಸೇರಿದಂತೆ ಎಲ್ಲ ಕ್ಷೇತ್ರಗಳಿಗೂ ವಸ್ತು, ಸಾಮಗ್ರಿಗಳನ್ನು ವಿಶ್ವಕರ್ಮ ಸಮಾಜದವರು ತಯಾರಿಸಿ ಕೊಡುತ್ತಾರೆ.

ವಿಶ್ವಕರ್ಮರು ಸಮಾಜದ ಪ್ರತಿಯೊಬ್ಬರಿಗೂ ಬೇಕಾದವರು. ಸಮಾಜಕ್ಕೆ ವಿಶ್ವಕರ್ಮ ಸಮುದಾಯದವರ ಕೊಡುಗೆ ಅಪಾರವಾಗಿದೆ ಎಂದು ಸಂಸದ ಸುರೇಶ ಅಂಗಡಿ ಅವರು ಹೇಳಿದರು.

ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸೋಮವಾರ (ಸೆ.17) ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತ್ಯುತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವಕರ್ಮ ಸಮುದಾಯದವರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಹೋರಾಟಗಾರರಿಗೆ ಆಯುಧಗಳನ್ನು ತಯಾರಿಸಿ ಕೊಟ್ಟು, ತಮ್ಮದೇ ರೀತಿಯಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಸೇವೆ ಸಲ್ಲಿಸಿದ್ದಾರೆ ಎಂದರು.

ವಿಮಾನ, ರಾಕೆಟ್, ಬಾಹ್ಯಾಕಾಶ ಯಾನಕ್ಕೆ ನೌಕೆ ಕಳುಹಿಸುವಲ್ಲಿಯೂ ಕೂಡ ವಿಶ್ವಕರ್ಮರ ಕೊಡುಗೆ ಇದ್ದೆ ಇರುತ್ತದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ನಿಮಿತ್ಯ ನಡೆಯಬೇಕಿದ್ದ ಮೆರವಣಿಗೆಯನ್ನು ರದ್ದುಗೊಳಿಸಿ ಮೆರವಣೆಗೆಯ ಹಣವನ್ನು ಕೊಡಗು ಸಂತ್ರಸ್ಥರ ನೆರವಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿರುವುದು ಸಂತಸದ ವಿಷಯ ಎಂದು ಸುರೇಶ ಅಂಗಡಿ ಅವರು ಸಮಾಜದ ಮುಖಂಡರನ್ನು ಅಭಿನಂದಿಸಿದರು.

ನಿವೃತ್ತ ಕೆ.ಪಿ.ಟಿ.ಸಿ.ಎಲ್ ಅಧಿಕಾರಿ ಹಾಗೂ ಸಾಹಿತಿಗಳಾದ ಹುಬ್ಬಳ್ಳಿಯ ಭೀಮಸೇನ ಬಡಿಗೇರ ಅವರು ಉಪನ್ಯಾಸ ನೀಡಿ, ದೇವಶಿಲ್ಪಿ ವಿಶ್ವಕರ್ಮರು ದೇವಾನು ದೇವತೆಗಳಿಗೆ ಆಯುಧ ಹಾಗೂ ಸಿಂಹಾಸನಗಳನ್ನು ತಯಾರಿಸಿ ಕೊಟ್ಟಿದ್ದರು

ಎಂಬುದರ ಕುರಿತು ಪುರಾಣಗಳಿಂದ ತಿಳಿದು ಬರುತ್ತದೆ. ವಿಶ್ವಕರ್ಮರ ಕುರಿತು ಭಾಗವತ, ಪುರಾಣ ಹಾಗೂ ಉಪನಿಷತ್‍ಗಳಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಿದರು.

ರಾಜ, ಮಹಾರಾಜರು ಶಿಲ್ಪಕಲೆಗೆ ಹೆಚ್ಚಿನ ಮಹತ್ವ ನೀಡಿ, ವಿಶ್ವಕರ್ಮ ಸಮುದಾಯದವರನ್ನು ಪೋಷಿಸಿ, ಬೆಳೆಸಿದರು. ದೇಶದ ಅನೇಕ ಪ್ರಸಿದ್ಧ ದೇವಾಲಯ ಹಾಗೂ ಪ್ರವಾಸಿ ತಾಣಗಳನ್ನು ವಿಶ್ವಕರ್ಮರು ರಚಿಸಿದ್ದಾರೆ.

ಶಿಲ್ಪಶಾಸ್ತ್ರಕ್ಕೆ ಸಂಬಂಧಿಸಿದಂತೆ 340 ಗ್ರಂಥಗಳು ಲಭ್ಯವಿವೆ. ವಿಶ್ವಕರ್ಮರು ಪ್ರಪ್ರಥಮ ಲಿಪಿಕಾರರಾಗಿದ್ದಾರೆ ಎಂದು ತಿಳಿಸಿದರು.
ಕಾಯಕವೇ ಕೈಲಾಸ ಎಂಬ ತತ್ವವನ್ನು ವಿಶ್ವಕರ್ಮರು ಪ್ರಾಚೀನ ಕಾಲದಿಂದಲೂ ಪಾಲಿಸಿಕೊಂಡು ಬರುತ್ತಿದ್ದಾರೆ. ವಿಶ್ವಕರ್ಮ ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ. ಇದು ಮಾನವ ಕಲ್ಯಾಣಕ್ಕಾಗಿ ಇಡೀ ವಿಶ್ವಕ್ಕೆ ಬೇಕಾಗಿರುವ ಸಮುದಾಯವಾಗಿದೆ ಎಂದರು.

ದೇಶದ ಬೆನ್ನೆಲುಬು ರೈತರಾದರೆ, ರೈತರ ಬೆನ್ನೆಲುಬು ವಿಶ್ವಕರ್ಮರಾಗಿದ್ದಾರೆ. ಆದ್ದರಿಂದ ವಿಶ್ವಕರ್ಮ ಸಮುದಾಯದ ಏಳ್ಗೆಗೆ ಸರ್ಕಾರ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಸಮುದಾಯದವರಿಗೆ ತಾಂತ್ರಿಕ ತರಬೇತಿ ನೀಡಿ, ವಿವಿಧ ಕಾರ್ಯಗಳಿಗೆ ಬಳಸಿಕೊಳ್ಳುವ ಕುರಿತು ಚಿಂತಿಸಬೇಕಿದೆ ಎಂದು ಹೇಳಿದರು.

ಶಿಲ್ಪಶಾಸ್ತ್ರ ಹಾಗೂ ವಿಶ್ವಕರ್ಮ ಸಮುದಾಯದ ಕುರಿತು ರಾಜ್ಯ ಸರ್ಕಾರ ಪುಸ್ತಕ ಪ್ರಕಟಿಸಬೇಕು. ವಿಶ್ವಕರ್ಮ ಎಂಬ ಹೆಸರಿನ ಮುಂದೆ ದೇವಶಿಲ್ಪಿ ಎಂಬ ಹೆಸರನ್ನು ನಮೂದಿಸುವಂತೆ ಸೂಚನೆ ಹೊರಡಿಸಬೇಕೆಂದು ಮನವಿ ಮಾಡಿದರು.

ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಸಾಹಿತ್ಯದ ಎರಡು ಕಣ್ಣುಗಳಾಗಿವೆ. ಇವು ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚಿಸಿವೆ. ಸಾಹಿತ್ಯ ಮತ್ತು ಪರಂಪರೆಯಿಂದ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಅನಿಲ ಬೆನಕೆ ಅವರು, ವಿಶ್ವಕರ್ಮರು ಹಿಂದೂ ಸಮಾಜದ ನಿರ್ಮಾತೃವಾಗಿದ್ದಾರೆ. ಜಗತ್ತಿನ ಸೃಷ್ಠಿಕರ್ತರಾಗಿದ್ದಾರೆ ಎಂದು ಹೇಳಿದರು.

ಯಾವುದೇ ವೃತ್ತಿಯೂ ಕೇಳಲ್ಲ, ವೃತ್ತಿ ಯಾವುದೇ ಇರಲಿ ಅದನ್ನು ಹೆಮ್ಮೆಯಿಂದ ಮಾಡಬೇಕು. ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಸಹ ವಿಶ್ವಕರ್ಮರ ಕಾಯಕಕ್ಕೆ ಎಂದಿಗೂ ದಕ್ಕೆ ಬರುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಮಹಾಪೌರರಾದ ಬಸಪ್ಪ ಚಿಕ್ಕಲದಿನ್ನಿ, ಉಪವಿಭಾಗಾಧಿಕಾರಿ ಕವಿತಾ ಯೋಗಪ್ಪನವರ, ಎಸಿಪಿ ಶಂಕರ ಮಾರಿಹಾಳ, ವಿಶ್ವಕರ್ಮ ನಿಗಮದ ಅಧ್ಯಕ್ಷರಾದ ಬಸವಣ್ಣೆಪ್ಪ ಬಡಿಗೇರ, ಅಧಿಕಾರಿಗಳು, ಸಮಾಜದ ಮುಖಂಡರು ಸೇರಿದಂತೆ ನೂರಾರು ಜನರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಶಹಾಪೂರದ ಕಾಳಿಕಾ ಮಹಿಳಾ ಮಂಡಳದ ಸದಸ್ಯರು ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಶೈಲ ಕರಿಶಂಕರಿ ಸ್ವಾಗತಿಸಿದರು. ನಗರ ಸೇವಕರಾದ ಅಜ್ಜಪ್ಪ ಬಡಿಗೇರ ವಂದಿಸಿದರು. ನಿವೃತ್ತ ಶಿಕ್ಷಕರಾದ ಜಿ.ಎಸ್. ಸೋನಾರ ವಂದಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.